Tuesday, 4 August 2009

ಕೆಪ್ಪ...

ಕೆಪ್ಪ...
ಅದ್ಯಾರು ಹೆಸರಿಟ್ಟರೋ? ಅದಕ್ಕೆ ತಕ್ಕಂತೆ ಕಿವುಡೇ ಆಗಿದ್ದ. ಅಥವಾ ಅವನ ಕಿವುಡನ್ನೇ ನೋಡಿ ಆ ಹೆಸರು ಬಂತೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಹುಟ್ಟಿದಾಗಿನಿಂದ ಕಂಡ ಜೀವಗಳಲ್ಲಿ ಅದೂ ಒಂದು. ದೊಡ್ಡಪ್ಪನ ಮದುವೆಯಾಗಿ ದೊಡ್ಡ ಸಂಸ್ಥಾನದಂಥ ಮನೆಗೆ ದೊಡ್ಡಾಯಿ ಬರುವಾಗ ಆಕೆಯ ತವರಿನವರು ಹಸುವನ್ನು ಹೊಡೆದು ಕಳುಹಿಸುವಂತೆ ಅವನನ್ನು ಕಳುಹಿಸಿದ್ದರು. ಹಾಗೆ ಬಂದ ಜೀವ ಕಡಿಮೆಯೆಂದರೂ ಐವತ್ತು ವರ್ಷಗಳ ಕಾಲ ನಮ್ಮ ಮನೆಯಲ್ಲೇ ಇತ್ತು ಎಂಬುದನ್ನು ನೆನೆದುಕೊಂಡರೆ..ಕಾಲವಾಗಿ ನಾಲ್ಕಾರು ವರ್ಷಗಳ ಬಳಿಕ ಇತ್ತೀಚೆಗೆ ಕೆಪ್ಪ ಬದುಕಿದ ರೀತಿ ಯಾಕೋ ಗಾಢವಾಗಿ ತಾಕುತ್ತಿದೆ.
ಮಳೆ, ಚಳಿ, ಬಿಸಿಲೆನ್ನದೇ ಬೆಳಗ್ಗೆ ಬೇಗ ಎದ್ದು ಸೊಪ್ಪು ತರುವುದು, ಕೊಟ್ಟಿಗೆ ನಿಗಾ ಇಡುವುದು, ಮಣ್ಣು ಹೊರುವುದು ಒಟ್ಟಿನಲ್ಲಿ ಆಯಾ ಕಾಲದ ಕೆಲಸಗಳಿಗೆ ಎಂದೂ ಕೊರತೆಯಿಲ್ಲ. ಅದಕ್ಕೇ ಕೆಪ್ಪನಿಗೆ ಮೈ ಕಸುವು ಕಡಿಮೆಯಾದಾಗ ದೊಡ್ಡಪ್ಪ ಕೆಲಸ ಸಾಗದೆಂದು ಹಾರಾಡುತ್ತಿದ್ದ. ಚಹಾ, ತಿಂಡಿ, ತಂಗಳನ್ನದ ಊಟದ ಜತೆಗೆ ರಾತ್ರಿಯವರೆಗೂ ಮೈಮುರಿಯುವಂಥ ದುಡಿತ. ರಾತ್ರಿ ತನ್ನ ಪಾಡಿಗೆ ಬೀಡಿ ಎಳೆಯುತ್ತಾ, ಆಕಾಶ ನೋಡುತ್ತಾ ಮಲಗುತ್ತಿದ್ದ ಕೆಪ್ಪ ಅಂದು ಮನುಷ್ಯನೆಂದೇ ಅನಿಸಿರಲಿಲ್ಲ. ಕಂಡಾಗಿನಿಂದ ಬೊಚ್ಚು ಬಾಯಲ್ಲೇ ಇದ್ದ ಕಪ್ಪು ಮೈನ ಕೆಪ್ಪ, ಕೊಟ್ಟಿಗೆಯ ಒಂದು ಪಕ್ಕದಲ್ಲಿ ದನ ಕರುಗಳ ಜೊತೆಗೇ ಮಲಗುತ್ತಿದ್ದುದು. ಅಲ್ಲೇ ಅವನ ಮಂಚ. ಅದರ ಮೇಲೆ ನೇತಾಡುತ್ತಿದ್ದ ಕತ್ತಿ..ಕುಡುಗೋಲು..
ದೊಡ್ಡಪ್ಪನ ದೊಡ್ಡಸ್ತಿಕೆ ಜತೆಗೆ ಸ್ವಲ್ಪ ಅತಿ ಅನಿಸುವಂತ ಸಿಟ್ಟು ಸಹಿಸಿಕೊಂಡು, ವರ್ಷಕ್ಕೆರಡು ಬಾರಿ ಪಿತ್ಥ ನೆತ್ತಿಗೇರಿ ಹೊಡೆದರೆ ಹೊಡೆಸಿಕೊಂಡು..ಹುಂ ಹುಂ.. ಎಂದು ಮುಲುಗುಟ್ಟುತ್ತಿದ್ದುದು ಈಗಲೂ ಕಿವಿಗೆ ಕೇಳಿಸಿದಂತಾಗುತ್ತದೆ. ಕೈ-ಬಾಯಿ ಸನ್ನೆಯಲ್ಲೇ ಎಲ್ಲ ಅರ್ಥೈಸಿಕೊಳ್ಳುತ್ತಿದ್ದವ, ಮಕ್ಕಳು ಏನಾದರೂ ಛೇಡಿಸಿದರೆ ಬೊಚ್ಚು ಬಾಯಿ ಬಿಟ್ಟುಕೊಂಡು ನಗುತ್ತಿದ್ದ. ಯಾವತ್ತೂ ಅವನನ್ನು ನಾವು ವಿಶ್ವಾಸಕ್ಕೆ ಪಾತ್ರವೆಂದು ಪರಿಗಣಿಸಿಯೇ ಇರಲಿಲ್ಲ. ಆದರೆ, ಅವನಿಗೆ ಅನ್ನ, ತಿಂಡಿ ಕಡಿಮೆ ಕೊಡುತ್ತಾರೆಂದು ಅನ್ನಿಸಿದರೆ, ಬೇಜಾರಾಗುತ್ತಿತ್ತು. ಯಾಕೀಗೆ? ಎನಿಸುತ್ತಿತ್ತು. ಆಯಿ ಹತ್ತಿರ ಹೇಳಿ ‘ನೀನಾದರೂ ಕೊಡು’ ಎಂದರೆ, ‘ಅಯ್ಯೋ ದೊಡ್ಡಪ್ಪ ಬೈಯುತ್ತಾರೆ’ಎಂದು ಹಿಂಜರಿಯುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಏನಾದರೂ ನೀಡುತ್ತಿದ್ದಳು.
ಅಕ್ಟೋಬರ್ ತಿಂಗಳ ರಜೆಯಲ್ಲಿ ಆಟದ ಹಾಣೆಗಿಂಡು ಕೆತ್ತಿಕೊಡಲು ನೆರವಾಗುತ್ತಿದ್ದ ಕೆಪ್ಪ. ಮಿರಿ ಮಿರಿ ಮಿಂಚುವ ಕತ್ತಿ ತಾನು ಹರಿತವೆಂದು ತೋರುತ್ತಿದ್ದರೆ ಸರಸರನೆ ಹಾಣೆಗಿಂಡು, ಕೋಲು ರೆಡಿಯಾಗುತ್ತಿತ್ತು. ಅಂಥ ಕೆಪ್ಪನಿಗೂ ಒಮ್ಮೊಮ್ಮೆ ಕೋಪ ಬಂದರೆ, ಜೋರಾಗಿ ಕಿರುಚಾಡುತ್ತಿದ್ದ. ದೊಡ್ಡಪ್ಪನ ಮೇಲೆ. ಏನು ಹೇಳುತ್ತಿದ್ದಾನೆ ಎಂಬುದೇ ತಿಳಿಯದ್ದರಿಂದ ಬಹುಶಃ ಅಷ್ಟು ವರ್ಷ ಅಲ್ಲಿರಲು ಸಾಧ್ಯವಾಯಿತು.
ನನ್ನನ್ನು ಆಗಾಗ ಕಂಗಾಲು ಮಾಡುವ ವಿಚಾರವೆಂದರೆ, ಅವನಿಗೂ ಒಮ್ಮೆ ಮದುವೆಯಾಗಿತ್ತು..ಮಕ್ಕಳಿದ್ದರು ಎನ್ನುವುದು. ಮದುವೆಯಾಗಿ, ಮಕ್ಕಳಿದ್ದವನನ್ನು ಇನ್ನೊಬ್ಬರ ಸಂಸಾರಕ್ಕೆ ಕೆಲಸ ಮಾಡಿಕೊಡಲು ಕಳುಹಿಸಿದ್ದರೆಂಬ ವಿಚಾರ ಬುದ್ಧಿ ಬಲಿಯುತ್ತಿದ್ದಂತೆ ನಮಗೆ ತಿಳಿದಿತ್ತು. ಹೇಗೆ ಹೆಂಡತಿ, ಮಕ್ಕಳನ್ನು ಬಿಟ್ಟು ಬಂದ ಎಂಬುದು ನಿಗೂಢ. ಅಥವಾ ಪರಿಸ್ಥಿತಿಯೇ ಹಾಗಿರಲೂ ಸಾಧ್ಯವಿತ್ತು. ಕೆಲವೊಮ್ಮ ಅವನ ಮಗಳು ಅಪ್ಪನನ್ನು ನೋಡಿಕೊಂಡು ಹೋಗಲು ಬರುತ್ತಿದ್ದಳು. ಕೆಲವು ನಿಮಿಷಗಳ ಮಾತುಕತೆ ಅಷ್ಟೆ. ಕೊಟ್ಟಿಗೆಯ ಅವನ ಹಾಸಿಗೆಯ ಮೇಲೆ ಕುಳಿತೇ ಆಡುವ ಮಾತುಕತೆ. ಆಗೆಲ್ಲ ನಾವು ಯಾರಾದರೂ ಸಿಕ್ಕರೆ, ‘ತನ್ನ ಮಗಳು’ ಎಂಬಂತೆ ಖುಷಿಯಿಂದ ಸನ್ನೆ ಮಾಡಿ ತೋರಿಸುತಿದ್ದುದು ಈಗ ಯಾಕೋ ಎದೆಯನ್ನು ಒದ್ದೆ ಮಾಡುತ್ತಿದೆ.
ದೊಡ್ಡಾಯಿ ಸತ್ತ ಬಳಿಕ ಅವನಿಗೆ ಈ ಮನೆಯಲ್ಲಿ ತನ್ನವರು ಯಾರೂ ಇಲ್ಲವೆಂದು ಅನಿಸುತ್ತಿತ್ತೋ ಏನೋ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಅವನಿಗೂ ವಯಸ್ಸಾಗಿತ್ತು. ದೊಡ್ಡಪ್ಪನೂ ಸೊಸೆಯ ಆಡಳಿತದಲ್ಲಿ ಮೆದುವಾಗಿದ್ದ. ಅಷ್ಟು ವರ್ಷ ದುಡಿಸಿಕೊಂಡು, ಕನಿಷ್ಟವೆಂದರೂ ಐವತ್ತು ವರ್ಷ ಕಾಲ ಲಕ್ಷಾಂತರ ರೂ.ದುಡಿದಿದ್ದ ಕೆಪ್ಪ ಮನೆಯಿಂದ ಹೊರಬಿದ್ದಿದ್ದ. ಅಲ್ಪ, ಸ್ವಲ್ಪ ಹಣ ನೀಡಿದ್ದರು ಎಂಬ ಸುದ್ದಿಯುತ್ತು. ಆದರೆ, ನ್ಯಾಯವಂತೂ ಸಿಗುವ ಸಾಧ್ಯತೆಯೇ ಇರಲ್ಲ. ಹತ್ತಿರದ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸಿ, ನಾವು, ನಮ್ಮ ಮನೆಯವರು ಕಂಡಾಗ ನಕ್ಕು, ಕೈ ಬಾಯಿ ಸನ್ನೆಗಳ ಮೂಲಕ ತನ್ನದೇ ಭಾಷೆಯಲ್ಲಿ ಆತ್ಮೀಯತೆ ತೋರುತ್ತಿದ್ದ ಕೆಪ್ಪ ಸತ್ತಾಗ ಮಣ್ಣು ಮಾಡಲು ಯಾರೂ ಇರಲಿಲ್ಲ. ಎಲ್ಲರ ಜೀವನದ ಅಂತಿಮ ರಹಸ್ಯವೂ ಇದೇ ಇರಬಹುದೇ?
ತಾಯಿಯಾಗುವ ಹಂತದಲ್ಲಿರುವ ನನಗೀಗ ಕೆಪ್ಪನಲ್ಲೂ ಅಪ್ಪ ಕಾಣಿಸುತ್ತಾನೆ.