Monday 21 September 2009

ಬಪ್ಪ...

ಬಪ್ಪ.. ಎಲ್ಲರ ಕಣ್ಣಿಗೆ ದೊಡ್ಡ ಹೆಗಡೇರು. ನಮಗೆಲ್ಲ ಮಗಾ ಮಗಾ ಎನ್ನುವ ಸ್ನೇಹಜೀವಿ. ಮಕ್ಕಳನ್ನು ಕಂಡರೆ ಅದೇನು ವಾತ್ಸಲ್ಯವೋ?..ಮಗಳೇ, ಮಗಾ ಎಂದೇ ನಮ್ಮನ್ನು ಮಾತನಾಡಿಸುತ್ತಿದ್ದ ಬಪ್ಪ ನಮ್ಮದೇ ಅಪ್ಪಂದಿರ ಹತ್ತಿರ ಮಾತ್ರ ಹೆಚ್ಚಾಗಿ ದ್ವೇಷವನ್ನೇ ಸಾಸಿದವ...ತನ್ನ ಸರೀಕರಲ್ಲಿ ಯಾವತ್ತೂ ಜಗಳ ಕಾಯ್ದುಕೊಂಡಿದ್ದವ.
ಪ್ರಾಯಕಾಲದಲ್ಲಿ ದೊಡ್ಡ ಅಡಿಕೆ ಮೂಟೆಯನ್ನು ಒಬ್ಬನೇ ಹೊರುತ್ತಿದ್ದನಂತೆ...ಇಡೀ ತೋಟವನ್ನು ಒಬ್ಬನೇ ಹದ ಮಾಡಿದ್ದನಂತೆ. ಸಿಟ್ಟು ಬಂದಾಗ ಮಗು ಎಂಬುದನ್ನು ನೋಡದೇ ಅವನದ್ದೇ ಮಗನನ್ನು ಅಂಗಳಕ್ಕೆ ತೆಗೆದು ಬಿಸಾಕಿದ್ದನಂತೆ..ಎಂಬಿತ್ಯಾದಿ ಅವನ ಕುರಿತಾಗಿದ್ದ ಕಥೆಗಳು ರೋಚಕವೆನಿಸುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸುಮಾರು ೬೫ ದಾಟಿದ ಬಳಿಕವೂ ರಾತ್ರಿ ಹೊತ್ತು ತೋಟಕ್ಕೆ ಹೋಗಿ ಬರುತ್ತಿದ್ದುದನ್ನು ನಾವೇ ಕಂಡಿದ್ದರಿಂದ ಭಾರೀ ಸಾಹಸಿ ಎಂದು ಎಂದೇ ಭಾವಿಸಿದ್ದೆವು.
ಹೇಳಿಕೊಳ್ಳುವಂತ ಸಿರಿವಂತರೇನೂ ಅಲ್ಲದಿದ್ದರೂ ದೊಡ್ಡಸ್ತಿಕೆ ತೋರುವುದರಲ್ಲಿ ಬಪ್ಪ ಎಂದಿಗೂ ಹಿಂದೇಟು ಹಾಕುತ್ತಿರಲಿಲ್ಲ. ಅದಕ್ಕಾಗಿಯೇ ಊರಿನಲ್ಲಿ ಒಂದು ವಿಶಿಷ್ಟ ಸ್ಥಾನ ಕಾಪಾಡಿಕೊಂಡಿದ್ದ ಎಂದರೂ ಸರಿ. ಅಪ್ಪ ಹಾಗೂ ಚಿಕ್ಕಪ್ಪನಲ್ಲಿ ಹಲವಾರು ಬಾರಿ ಜಗಳ ಕಾಯ್ದುಕೊಂಡು, ಕತ್ತಿ ತೆಗೆದು ಹೊಡೆಯಲು ಹೊರಟಿದ್ದನ್ನು ನಾವೇ ಎಷ್ಟೋ ಸಲ ನೋಡಿದ್ದೆವು. ಆಗೆಲ್ಲ ಅವನ ಬಗ್ಗೆ ಒಂದು ಬಗೆಯ ಭಯವಾಗುತ್ತಿತ್ತು. ಜಗಳವಾದ ಮಾರನೇ ದಿನವೇ ಮಗಳೇ ಎಂದು ಆತ್ಮೀಯವಾಗಿ ಕರೆದು, ನಿನ್ನೆಯಷ್ಟೇ ಅಪ್ಪನೊಂದಿಗೆ ಕಿತ್ತಾಡಿದ ಬಪ್ಪ ಇವನೇನಾ ಅನ್ನಿಸುವಂತೆ ಮಾಡಿಬಿಡುತ್ತಿದ್ದ.
ಅವನೊಂದಿಗೆ ಚಹಾ ಕುಡಿಯಲು, ತಂಬಾಕಿನ ಕವಳ ಹಾಕಲು ನಾನು ಎಷ್ಟೋ ಬಾರಿ ಜತೆಗಾರ್ತಿಯಾಗಿರುತ್ತಿದ್ದೆ. ತಂಬಾಕು ತಿನ್ನಬೇಡ ಎಂದು ಅಪ್ಪ ಬೈಯ್ದು, ಹೊಡೆದರೂ ಸಣ್ಣ ಎಲೆಯಲ್ಲಿ ಕವಳ ಮಾಡಿ ತಂಬಾಕು ಸೇರಿಸಿ ‘ಏನಾಗುವುದಿಲ್ಲ, ತಿನ್ನು. ನಾನಿಲ್ಲದಿದ್ದಾಗ ಒಬ್ಬಳೇ ತಿನ್ನಬೇಡ’ಎಂದು ಕೊಡುತ್ತಿದ್ದ ಬಪ್ಪನ ಪ್ರೀತಿಯನ್ನು ಅಲ್ಲಗಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಅವನೊಂದಿಗೆ ಚಹಾ ಕುಡಿದರೆ ಅಮ್ಮನಿಗೂ ಬೇಸರವಾಗುತ್ತಿತ್ತು. ‘ನಿಂಗೆ ಚಹಾ ರೂಢಿ ಮಾಡಿಬಿಡುತ್ತಾನೆ. ಆಮೇಲೆ ಬಿಡುವುದು ನಿಂಗೆ ಸಾಧ್ಯವಾಗುವುದಿಲ್ಲ’ಎಂಬ ಆಕ್ಷೇಪ ಅವಳದ್ದು. ಆದರೆ, ಹೈಸ್ಕೂಲು ಮೆಟ್ಟಿಲೇರುತ್ತಿದ್ದಂತೆ ನಾನು ತಂಬಾಕು ಬಿಟ್ಟೆ, ಜತೆಗೆ ಚಹಾವೂ ದೂರವಾಯಿತು ಎಂಬುದು ಬೇರೆ ಮಾತು.
ಅವಳು ಮಾದಿ. ಹಾಗೆಂದರೆ ಯಾರಿಗೂ ಅರ್ಥವಾಗುವುದಿಲ್ಲ. ಮತ್ತೀಗಾರ ಮಾದಿ ಎಂದರೆ ನಮ್ಮೂರಿನ ಎಲ್ಲರಿಗೂ ಆಕೆಯ ಚಿತ್ರಣ ತಕ್ಷಣ ಮೂಡುತ್ತದೆ. ಪೂರ್ತಿ ಹೆಸರು ಮಹಾದೇವಿ. ಯಾರು ಹಾಗೆ ಕರೆದರೋ ಗೊತ್ತಿಲ್ಲ, ಮಾದಿ ಎಂದೇ ಹೆಸರಾಗಿದ್ದು ನಿಜ. ಇಬ್ಬರು ಮಕ್ಕಳನ್ನು ಹೊಂದಿದ್ದ ಆಕೆಯ ಗಂಡ ಎಲ್ಲಿಗೆ ಹೋಗಿದ್ದ, ಏನು ಮಾಡುತ್ತಿದ್ದ ಎಂಬುದು ಬಹುಶಃ ಯಾರಿಗೂ ತಿಳಿದಿಲ್ಲ. ಬಪ್ಪನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಕೆ ನಾ ಕಂಡಂತೆ ತೀರ ಸರಳವಾಗಿಯೇ ಇದ್ದಳು. ಆದರೆ, ನನ್ನ ಆಯಿ, ಚಿಕ್ಕಮ್ಮ ಮುಂತಾದ ಹೆಂಗಸರ ‘ಒಂದು ರೀತಿಯ’ದೃಷ್ಟಿಗೆ ಆಕೆ ಯಾಕೆ ಕಾರಣಳಾಗಿದ್ದಳು ಎನ್ನುವುದು ನನಗೆ ಹೈಸ್ಕೂಲು ದಾಟಿದ ಬಳಿಕ ಅರಿವಾಯಿತು.
ಬಪ್ಪ ದಿನವೂ ರಾತ್ರಿ ಹೋಗುತ್ತಿದ್ದುದು ತೋಟ ಕಾಯುವ ಕೆಲಸಕ್ಕಲ್ಲ, ಅವಳ ಮನೆಗೆ ಎಂಬುದೂ ನಿಧಾನ ತಿಳಿಯಿತು. ಆಗ ಕೆಲವು ದಿನಗಳ ಕಾಲ ಈ ವಿಚಾರ ತಲೆಕೆಡಿಸುವ, ಆನಂತರ ತಮಾಷೆಯ ವಸ್ತುವಾಗಿದ್ದ ನಮಗೆ ಈಗ ಅದೇನೂ ದೊಡ್ಡದಾಗಿ ಕಾಣಿಸುತ್ತಿಲ್ಲ. ವಿಶೇಷವೆಂದರೆ, ಹಸುವಿನಂತಹ ದೊಡ್ಡಾಯಿ ಈ ವಿಚಾರ ತಿಳಿದಿದ್ದರೂ ಬಪ್ಪನ ಮೇಲೆ ಬೇಸರ ತೋರಿಸಿಕೊಂಡಿದ್ದನ್ನು ನಾವ್ಯಾರೂ ಕಂಡಿಲ್ಲ.
ವಿಷಾದವೆಂದರೆ, ಬಪ್ಪನಂತಹ ಗಂಡಸಿನ ಸ್ನೇಹ ಮಾಡಿಯೂ ಸಹ ಮಾದಿ ತನ್ನ ಮಗಳನ್ನು ಮದುವೆ ಮಾಡಲು ಸಾಹಸಪಟ್ಟಿದ್ದು ನಮ್ಮ ಕಣ್ಣೆದುರಿಗೇ ನಡೆದಿತ್ತು. ಬದುಕಿನುದ್ದಕ್ಕೂ ಜತೆಗಾತಿಯಾಗಿದ್ದ ಹೆಣ್ಣನ್ನು ಕಷ್ಟ ಬಂದಾಗ ಬಿಟ್ಟುಬಿಡುವುದು ಗಂಡಸಿಗೆ ಮಾತ್ರ ಸಾಧ್ಯವೇನೋ? ಆ ಕಾಲಕ್ಕೆ ಬಪ್ಪನೂ ಸಾಕಷ್ಟು ಹಣ್ಣಾಗಿದ್ದ. ಮನೆಯ ಆಡಳಿತದಲ್ಲಿ ಅವನ ಹಸ್ತಕ್ಷೇಪವಿರಲಿಲ್ಲ ಎನ್ನುವುದು ನಿಜವಾದರೂ, ಹಾಗೆ ಕಷ್ಟದಿಂದ ದೂರವಾಗಿ ನಿಂತಿದ್ದು ಮಾತ್ರ ಇವತ್ತಿಗೂ ಮನದ ಆಳದಲ್ಲಿ ಎಲ್ಲೋ ಎಚ್ಚರಿಕೆಯ ಗಂಟೆಯಾಗಿ ನಿಂತಿದೆ.

ನಂಬಿ ಕೆಟ್ಟವರಿಲ್ಲ!

ನಂಬಿ ಕೆಟ್ಟವರಿಲ್ಲ!

ಯಾವುದೀ ರಾಗ?
ವಸಂತ ಮಾತ್ರವಲ್ಲ, ವರ್ಷವಿಡೀ
ಕೇಳಿದ್ದ ರಾಗ ಚಿರಪರಿಚಿತ.
ಹೆಸರು ಮಾತ್ರ ಗೊತ್ತಿಲ್ಲ.

ರಾಗದ ಚೆಲುವು ನನಗಾಗಿ ಅಲ್ಲ..ವೆಂಬ ಸತ್ಯ ಗೊತ್ತಿದ್ದರೂ
ಚಂಚಲಗೊಳ್ಳುವ ಮನಸು.
ಹಾಡುತ್ತ ಹಾಡುತ್ತ..
ಮೋಡಿ ಮಾಡುವ ರಾಗಕ್ಕೆ ಮನ ಸೋಲದವರ‍್ಯಾರು?

ಹಳೆಯ ರಾಗವಾದರೂ ಹೊಸತರಂತೆ ಹಾಡುವ ಕಲೆ
ಅದಕ್ಕೆ ಗೊತ್ತು.
ಹೇಳಿದ್ದನ್ನೇ ಹೇಳುತ್ತ..
ಹಾಡಿದ್ದನ್ನೇ ಹಾಡುತ್ತಿದ್ದರೂ ಮನ ಸೋತಿದೆ.

ಮಧುರ ಕಂಠದಲ್ಲಿದೆ
ಹಳೆಯ ದಿನಗಳ ಮೆಲುಕು.
ರಾಗದಲ್ಲಿ ಎದೆಹಾಡು.
ಭಾವದಲ್ಲಿ ಮಾತ್ರ ಏನೋ ಅದಲು-ಬದಲು.

ಅದು ಗಂಡು ಹಕ್ಕಿ.
ಹಾಡಿಗೆ, ರಾಗಕ್ಕೆ, ಬದಲಾವಣೆಗೆ
ಹೇಳಿಕೊಡಬೇಕೇ?
ದಿಕ್ಕು ತಪ್ಪಿಸುವ ಹಕ್ಕಿ.