ಚಳಿಗೊಂದು ಬಾಲ್ಯದ ಸಲಾಮು
---------------
ದೂರದ ಸ್ವಿಟ್ಜರ್‌ಲ್ಯಾಂಡ್, ಯುರೋಪ್ ದೇಶಗಳು, ನಮ್ಮದೇ ಕಾಶ್ಮೀರ, ಹಿಮಾಲಯಗಳಿಗೆ ಬದುಕಿನಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂದು ಕನಸುವ ಮಂದಿ ನಾವು. ಅಲ್ಲಿನ ಆಕರ್ಷಣೆ ಬೆಳ್ಳಗಿನ ಹಿಮ. ಬಿಸಿಲು ನಾಡಿನ ನಮಗೆ ಅಲ್ಲಿಯ ಉಗ್ರ ಚಳಿಯ ದಿನಗಳ ಕಷ್ಟ ಗೊತ್ತಿಲ್ಲ. ಹೀಗಾಗಿ ಆಕರ್ಷಣೆ ಹೆಚ್ಚು ಎನ್ನುವ ಸತ್ಯ ಗೊತ್ತಿದ್ದರೂ ಹಿಮ ಸೌಂದರ್ಯದ ಪ್ರತೀಕವಾಗಿಯೇ ಕಾಣುತ್ತದೆ.
ಈ ಚಳಿ ಎಂದೊಡನೆ ತಕ್ಷಣ ನೆನಪಾಗುವುದು ಬೆಂಕಿ. ಹಳ್ಳಿಗರಿಗೆ ಈ ಸುಖ ಗೊತ್ತು. ನಮ್ಮ ಮಲೆನಾಡಿನ ಮಂದಿಗಂತೂ ಚಳಿಗಾಲದ ಬೆಂಕಿ ಅತಿ ಆಪ್ತ. ಮಳೆಗಾಲದಲ್ಲಿ ಬೆಂಕಿ ಅನಿವಾರ್ಯವಾದರೆ ಚಳಿಗೆ ಬೆಂಕಿ ಪ್ಯಾಷನ್ ಆಗಿಬಿಡುತ್ತದೆ. ಚಳಿಯ ಮೋಹಕತೆಗೆ ಬೆಂಕಿ ಇನ್ನಷ್ಟು ಕಾವು ನೀಡುತ್ತದೆ. ಹಾಗಂತ ಚಳಿಯ ದಿನಗಳಲ್ಲಿ ಮಲೆನಾಡು ಹೊದ್ದು ಮಲಗಿಬಿಡುವುದಿಲ್ಲ, ವರ್ಷದ ಎಲ್ಲಾ ದಿನಗಳಿಗಿಂತ ಕ್ರಿಯಾಶೀಲವಾಗಿರಬೇಕಾದ ದಿನಗಳು ಇವು. ಏಕೆಂದರೆ ಅಡಕೆ, ಭತ್ತದ ಕೊಯ್ಲು ಇದೆ. ವರ್ಷದ ಒಂದೇ ಒಂದು ಬೆಳೆ ಕೈ ಸೇರುವ ಹೊತ್ತಲ್ಲಿ ಎಷ್ಟು ಚಳಿಯಿದ್ದರೇನು? ಸೋಮಾರಿತನ ಆವರಿಸಲು ಬಿಡುವಂತಿಲ್ಲ.
ಡಿಸೆಂಬರ್‌ನ ಸರಿ ಚಳಿಗಾಲದಲ್ಲಿ ಯಾರ ಮನೆಗೆ ಹೋದರೂ ಅಡಕೆ ಸುಲಿಯುವ ಚಟಪಟ ಸದ್ದು. ಬೆಳಗ್ಗೆ-ಸಂಜೆ ಅಡಕೆ ಒಣಗಿಸುವ ಅಟ್ಟದ ಮೇಲೆ ಬಹುಪಾಲು ಸಮಯ ಕಳೆಯುತ್ತದೆ. ಬಿಸಿಲು ಬರುವ ಹೊತ್ತಿಗೆ ಅಡಕೆ ಒಣಗಿಸುವುದು, ರಾತ್ರಿಯ ಇಬ್ಬನಿಗೆ ತೋಯ್ಯದಿರಲೆಂದು ಮತ್ತೆ ಒಟ್ಟುಗೂಡಿಸಿ ಪ್ಲಾಸ್ಟಿಕ್ಕೋ, ಗೋಣಿತಾಟಿನದ್ದೋ ಹೊದಿಕೆ ಹಾಕುವುದು, ಮತ್ತೆ ಮರುದಿನ ಥಟ್ ಥಟ್ ಎಂದು ತಟ್ಟಿ ತಟ್ಟಿ ಹರವುವುದು...ಸಂಜೆ ಮತ್ತೆ ಒಬ್ಬರಿಸುವುದು. ಹತ್ತಿರದಲ್ಲೇ ಟ್ರಾನ್ಸಿಸ್ಟರ್. ಧಾರವಾಢ ಆಕಾಶವಾಣಿಯಲ್ಲಿ ಸಂಜೆ ೫.೩೦ ಗೆ ಮೂಡಿಬರುವ ‘ಈ ಸೊಗಸಾದ ಸಂಜೆ’ ಹಾಡಿಗೆ ಮೈಮರೆತು ದನಿಗೂಡಿಸುವ ಅಣ್ಣ...
ಶಾಲೆಗೆ ಹೋಗುತ್ತಿದ್ದ ದಿನಗಳು ಅವು. ರಸ್ತೆ ಪಕ್ಕದ ಹುಲ್ಲು ಹಾಸಿನ ಮೇಲೆ ಮಣಿಗಳಂತೆ ಪೋಣಿಸಿಕೊಂಡಿರುತ್ತಿದ್ದ ಇಬ್ಬನಿಯನ್ನು ಹಾರಿಸುತ್ತ, ಹಾರಿಸುತ್ತ ಗೊತ್ತೇ ಆಗದಂತೆ ಯೂನಿಫಾರ್‍ಮ್ ಒದ್ದೆಯಾಗಿ ಹೋಗುತ್ತಿತ್ತು. ಕೆಲವೊಮ್ಮೆ ಆಗಲೇ ಅದನ್ನು ಯಾರೋ ತುಳಿದು ಹೋದ ಮಾರ್ಕು ಕಂಡು ಬೇಸರವಾಗುತ್ತಿತ್ತು. ಅರ್ಧ ಮೈಲು ನಡೆಯುವಷ್ಟರಲ್ಲಿ ಮುಂಗುರುಳು ಮಂಜಿನಲ್ಲಿ ತೋಯ್ದುಹೋಗುತ್ತಿತ್ತು. ರಾತ್ರಿ ಜೇಡ ಕಟ್ಟಿಹೋದ ಬಲೆಗೆ ಮುಖ ಸೋಕಿ ಬಾಯಿಗೆ ಏನೋ ಸಿಹಿ ಸಿಹಿ ಅಂಟಂಟು..ಈ ಸಮಯದಲ್ಲಿ ಬೀಳುವ ಇಬ್ಬನಿಯ್ನು ನೋಡಿಯೇ ಅಪ್ಪ ಹೇಳುತ್ತಿದ್ದ ‘ಈ ಬಾರಿ ಮಾವಿನಕಾಯಿ ಚೆನ್ನಾಗಿ ಕಚ್ಚುತ್ತದೆ’ಎಂದು. ಆದರೆ ಶಿಂಗಾರದೊಳಗೆ ಅಡಗಿ ಕೂತ ಅಡಕೆ ಮರಿಗಳು ಮಾತ್ರ ಬೆಳಗಿನ ಹೊತ್ತು ಪಟಪಟ ಬೀಳುತ್ತಿದ್ದಾಗ ‘ಓಹೋ ಇಬ್ಬನಿ ಹೆಚ್ಚಾಯ್ತು’ಎನ್ನುವರು.
ಅಂತಹ ಚಳಿಗಾಲದಲ್ಲೊಂದು ದಿನ ಬೆಳ್ಳಂಬೆಳಗ್ಗೆ ದೇವರಿಗೆ ಹೂವು ಕೊಯ್ದು ಬಂದು ಯೂನಿಫಾರಂಗೆ ಐರನ್ ಮಾಡಲು ಹೋಗಿ ಪೂರ್ತಿ ಸುಟ್ಟುಕೊಂಡಿದ್ದೆ. ಚಳಿಗೆ ಮರಗೆಟ್ಟಿದ್ದ ಕೈಗಳಿಗೆ ಐರನ್‌ಬಾಕ್ಸ್ ಕಾದ ಸಮಾಚಾರವೇ ಗೊತ್ತಾಗಿರಲಿಲ್ಲ. ಬಿಳಿ ಬಣ್ಣದ ಅಂಗಿಯ ಅರೆ ಸುಟ್ಟುಹೋಗಿದ್ದ ಜಾಗಕ್ಕೆ ಮತ್ತೊಂದು ಅಂಗೈಯಗಲದ ಬಿಳಿ ಬಟ್ಟೆ ಸೇರಿಸಿ ಹೊಲಿದುಕೊಟ್ಟಿದ್ದಳು ಅಮ್ಮ. ಅದರಲ್ಲೇ ಆ ವರ್ಷದ ಶಾಲೆ ಪೂರೈಸಿತ್ತು. ದೇವರ ಪೂಜೆಗೆ ಹೂವು ಸೇರಿಸುವುದು ಮುಂಜಾವಿನ ದೊಡ್ಡ ಕೆಲಸ ಚಳಿಯಲ್ಲಿ. ಗಿಡ-ಮರಗಳು ಚಳಿಯ ಅಬ್ಬರಕ್ಕೆ ಬೆಕ್ಕಸಬೆರಗಾಗಿ ಮೈ ಬರಿದು ಮಾಡಿಕೊಂಡು ನಿಂತುಬಿಡುವಾಗ ಹೂವೆಲ್ಲಿ? ಯಾವಾಗಲೂ ಬಿಡುವ ಪುಟ್ಟ ತುಂಬೆ, ಅಲ್ಲೊಂದು ಇಲ್ಲೊಂದು ಕಾಣುವ ಶಂಖಪುಷ್ಪ, ದೂರ್ವೆ, ತುಳಸಿಯೇ ಗತಿ. ಅದು ಬಿಟ್ಟರೆ ಗದ್ದೆಯಂಚಿಗೆ ಹಿಂಡುಹಿಂಡಾಗಿ ಬೆಳೆದ ಬಳ್ಳಿಯಿಂದ ಅಚ್ಚ ಹಳದಿಯ ಕೋಟೆ ಹೂವು, ಕೆಂಪು ಹಾಗೂ ಗಂಧದ ಬಣ್ಣದ ಬಾಲದಾಸವಾಳ ಕೊಯ್ಯಲು ಹೋಗುವುದು ಭಾನುವಾರ ಮಾತ್ರ. ಅಕ್ಕಪಕ್ಕದ ಮರಗಳನ್ನು ಬಳಸಿ ನಿಂತ ಆ ಹಿಂಡಿನ ಹತ್ತಿರ ಕಷ್ಟಪಟ್ಟು ಹೋದರೆ ಸಿಗುವುದು ನಾಲ್ಕಾರು ಹೂವುಗಳು ಮಾತ್ರ. ಆದರೂ ಕೊಯ್ಯಲೇಬೇಕು.
ಸುಲಿದ ಅಡಕೆ ಬೇಯಿಸಲೆಂದು ರಾತ್ರಿ ಹಂಡೆ ನೀರು ಕಾಯಿಸಲು ದೊಡ್ಡ ಉರಿ ಹಾಕಿದ ಅಪ್ಪ ಊಟ ಮುಗಿಸಿ ಬರುವುದರೊಳಗೆ ಅದರ ಎದುರು ಗೋಣಿತಾಟೊಂದನ್ನು ಹಾಕಿ ಅಲ್ಲಿಯೇ ಹೋಂವರ್ಕ್ ಸಂಭ್ರಮ. ಕೌದಿಯಡಿ ಬೆಚ್ಚಗೆ ಮಲಗಿದರೂ ಕೈಕಾಲುಗಳು ಬೆಚ್ಚಗಾಗುವಷ್ಟರಲ್ಲಿ ಉಚ್ಚೆ ಬಂದಂತಾಗಿ, ಹೋಗಿ ಬರುವ ಹೊತ್ತಿಗೆ ಮತ್ತೆ ಕೈಕಾಳುಗಳು ಮರಗಟ್ಟುವ ಆಟ ಶುರುವಾಗಿ ಸಿಹಿ ನಿದ್ದೆ. ಚಳಿಯ ಭಾನುವಾರದ ಚಿತ್ರಣ ಬೇರೆ. ಮಕ್ಕಳು ಶಾಲೆಗೆ ಹೋಗುತ್ತಾರೆಂಬ ಗಡಿಬಿಡಿಯಿಲ್ಲ. ಆದರೂ ಹೊತ್ತಿಗೆ ಸರಿಯಾಗಿ ತಿಂಡಿಯಂತೂ ಆಗುತ್ತಿತ್ತು. ಬಚ್ಚಲೊಲೆಯ ಬೆಂಕಿ ಧಗಿಸುತ್ತಿದ್ದಂತೆ ಅಮ್ಮನ ಎಣ್ಣೆ ಸ್ನಾನದ ಕಾರ್ಯ ಶುರು. ಸೀಗೆಕಾಯಿ ಪುಡಿ, ಮತ್ತಿಲೋಳೆ ಹಾಕಿ ನೆನೆಸಿಟ್ಟ ನೀರು ತಣ್ಣಗೆ ಕೊರೆದು ತಲೆಯಿಂದ ಇಳಿಯುವ ದಾರಿಯಲ್ಲೆಲ್ಲ ಚಿಕ್ಕ ನಡುಕ. ನಂತರ ಹಬೆಯಾಡುವ ಬಿಸಿನೀರಿಗೆ ತಲೆಯೊಡ್ಡಿದರೆ ಅಲ್ಲೇ ಕುಸಿದುಬೀಳುವಷ್ಟು ನಿದ್ರೆ. ಕೂದಲನ್ನು ಒಣಗಿಸುವ ನೆಪವಾಗಿಟ್ಟು ಅಟ್ಟ ಹತ್ತಿ ಬಿಸಿಲಿಗೆ ಕುಳಿತರೆ ತೂಕಡಿಕೆ, ಚಿಕ್ಕ-ಪುಟ್ಟ ಹಕ್ಕಿಗಳ ಚಿಲಿಪಿಲಿ ಸಂಭ್ರಮದ ಜೋಗುಳ.
ಚಳಿಯೆಂದರೆ ಒಳಗೆ ಏನೋ ಅರಳುತ್ತದೆ. ಪಕ್ಕಾ ಪ್ರಕೃತಿಯಂತೆ. ಮರವೆಲ್ಲ ಎಲೆಗಳನ್ನುದುರಿಸಿ ಬಟಾಬಯಲಾದರೂ ಅಲ್ಲಿಯೇ ಕೆಂಪು ಕೆಂಪು ಚಿಗುರು ಸಾಲಾಗಿ ಹುಟ್ಟುತ್ತ ಜಗದ ನಿಯಮವನ್ನು ಸಾರುತ್ತವೆ. ಅಂತಹುದ್ದೇ ಕಠೋರ ಚಳಿಯಲ್ಲಿ ಅಜ್ಜ ಮುರುಟಿ ಮುರುಟಿಕೊಂಡೇ ಪ್ರಾಣ ತೆತ್ತಿದ್ದು. ಪದರು ಪದರಾಗಿ, ಸುಕ್ಕಾಗಿದ್ದ ಆತನ ಮೈಕೈ ಚರ್ಮ ಬೆಚ್ಚಗಿದೆ ಎನಿಸುತ್ತಿತ್ತು. ಅವನ ಹಳೆಯ ಶಾಲಿನಡಿ ನಮ್ಮ ಕೈಕಾಲುಗಳನ್ನೂ ತೂರಿಸುತ್ತಿದ್ದೆವು. ಆದರೆ, ಚಳಿಗೆ ಜೀವ ಮರಗಟ್ಟುತ್ತಿದೆ ಎಂದು ಹೊತ್ತಾಗಲೇ ಇಲ್ಲ. ಅಂವ ದಮ್ಮು ಹೆಚ್ಚಾಗಿ ಕೆಮ್ಮುತ್ತಿದ್ದ ದಿನಗಳನ್ನೂ ಚಳಿಗಾಲ ಅಡಗಿಸಿಟ್ಟುಕೊಂಡಿದೆ. ಸಂಜೆ ಆರಕ್ಕೆ ಪ್ರಾಣ ಬಿಟ್ಟ ಅಜ್ಜನಿಗೂ, ಅದೇ ದಿನ ಸಂಜೆ ೬.೩೦ ಗೆ ಅತ್ತಿಗೆಯ ಹೊಟ್ಟೆಯಿಂದ ಜನ್ಮ ತಳೆದ ಪಾಪು ಪುಟ್ಟಿಗೂ ಚಳಿಗಾಲದ ಮುಹೂರ್ತ ನಿಕ್ಕಿಯಾಗಿದ್ದು ಯಾವ ಮಾಯೆಯೋ?
ಅಪ್ಪನ ಆರೋಗ್ಯವಂತೂ ಕೈಕೊಡುವುದು ಯಾವತ್ತೂ ಚಳಿಗಾಲದಲ್ಲಿಯೆ. ನಾನಾಗ ಎಸ್‌ಎಸ್‌ಎಲ್‌ಸಿಯಲ್ಲಿದ್ದ ಸಮಯ. ರಕ್ತದ ವಾಂತಿ ಮಾಡಿಕೊಳ್ಳುತ್ತ ಬಸ್‌ಸ್ಟಾಪಿನಲ್ಲಿ ಅನಾಥವಾಗಿ ಮಲಗಿಕೊಂಡಿದ್ದ ಅಪ್ಪನನ್ನು ಕಂಡ ಯಾರೋ ಪುಣ್ಯಾತ್ಮರು ಮನೆಗೆ ಕರೆತಂದಿದ್ದರು. ಆಗ ಎಚ್ಚರವಾದಾಗ ನನ್ನ ಬೆನ್ನು ಸವರಿ ‘ನೀವಿನ್ನೂ ಚಿಕ್ಕವರು’ಎಂದು ಆಸ್ಪತ್ರೆಗೆ ಹೋಗಿದ್ದ ಅಪ್ಪನ ಮುಖಭಾವ ಇನ್ನೂ ಮರೆತಿಲ್ಲ. ಅದಾಗಿ ಕೆಲವು ವರ್ಷಗಳ ಬಳಿಕ ನಾನು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ಹಾರುವ ಸಂಭ್ರಮದಲ್ಲಿದ್ದೆ. ಅದನ್ನು ಮನೆಗೆ ಫೋನ್ ಮಾಡಿ ಹೇಳಿಯೂ ಇದ್ದೆ. ಅಪ್ಪನೂ ಖುಷಿಪಟ್ಟಿದ್ದ. ನಾಳೆ ಇನ್ನೇನು ಡ್ಯೂಟಿಗೆ ಜಾಯಿನ್ ಆಗಬೇಕು, ಅವತ್ತು ಹಿಂದಿನ ರಾತ್ರಿ ಅಪ್ಪನಿಗೆ ಬಿಪಿ ಹೆಚ್ಚಾಗಿ ಪಾರ್ಶ್ವವಾಯು ಬಂದು ಅಪ್ಪಳಿಸಿತ್ತು. ದುರಂತವೆಂದರೆ, ನನಗೆ ಗೊತ್ತಾಗಿದ್ದುದು ಸಹ ಮರುದಿನವೆ. ಆಗ ತಕ್ಷಣ ಊರಿಗೆ ಹೋಗದೆ ಕರ್ತವ್ಯದಿಂದ ಹಿಂದೆ ಉಳಿದೆ ಎಂದು ಈಗಲೂ ಕೆಲವೊಮ್ಮೆ ಕಾಡುತ್ತದೆ. ಈಗ ಅಪ್ಪ ಸುಧಾರಿಸಿಕೊಂಡಿದ್ದಾನೆ. ಆದರೂ ಚಳಿಯೆಂದರೆ ಜೀವಕ್ಕೆ ಹಿಂಸೆಯಾಗುತ್ತದೆ ಎನ್ನುತ್ತಾನೆ. ಎಷ್ಟೊಂದು ಆಯಾಮಗಳು ಚಳಿಗೆ!
ಇತ್ತೀಚೆಗೆ ಮಲೆನಾಡಿನ ಚಿತ್ರಣ ಬದಲಾಗಿದೆ. ಮನೆಗಳಲ್ಲಿ ಆಡುವ ಮಕ್ಕಳು ಕಡಿಮೆ. ರಟ್ಟೆ ಮುರಿದು ಕೆಲಸ ಮಾಡುವ ಯುವ ಪೀಳಿಗೆಯಂತೂ ಇಲ್ಲವೇ ಇಲ್ಲ. ಪ್ರತೀ ಮನೆಯಲ್ಲೂ ವಯಸ್ಸಾದವರು ನಿಧಾನ ಓಡಾಡಿಕೊಂಡು ಬಿಸಿಲು ಬರುತ್ತಿದ್ದಂತೆ ‘ಸ್ವಲ್ಪ ಚಳಿ ಕಾಯಿಸಿ ಮುಂದಿನ ಕೆಲಸ ನೋಡೋಣ’ ಎನ್ನುತ್ತಾರೆ. ಭಾನುವಾರವಾದರೆ ಅಷ್ಟೊತ್ತಿಗೆ ಬೆಂಗಳೂರಿನಲ್ಲಿರುವ ಮಗಳ ಫೋನ್ ಕರೆದಿರುತ್ತದೆ. ಮೊಮ್ಮಕ್ಕಳೊಡನೆ ಮಾತನಾಡಿ ಬರುವಷ್ಟರಲ್ಲಿ ಬಿಸಿಲು ನೆತ್ತಿಗೇರಿರುತ್ತದೆ.
ಅಷ್ಟಕ್ಕೂ ಮಲೆನಾಡಿನಲ್ಲೀಗ ವರ್ಷದ ಆರು ತಿಂಗಳು ಮಳೆಗಾಲ. ಈ ವಾತಾವರಣ ಕಳೆದ ನಾಲ್ಕು ವರ್ಷಗಳಿಂದ ಕೊಡುಗೆಯಾಗಿ ಬಂದಿದೆ. ಇದಕ್ಕೆ ವೈಜ್ಞಾನಿಕ ಕಾರಣ ಯಾರಿಗೂ ಗೊತ್ತಿಲ್ಲ. ಸ್ಥಳೀಯರು ಮಾತ್ರ ಒಬ್ಬೊಬ್ಬರು ಒಂದೊಂದು ಕತೆ ಹೇಳುತ್ತಾರೆ. ‘ಕೈಗಾ ಪರಮಾಣು ಸ್ಥಾವರ ಬಂದ ಮೇಲೆ ಹೀಗಾಯ್ತು’ಅನ್ನುವವರೂ ಇದ್ದಾರೆ. ಒಟ್ಟಿನಲ್ಲಿ ಹಿಂದಿನ ಚಳಿಗಾಲದ ಕಾವು ಎದೆಯಲ್ಲಿ ಮೂಡುವುದಿಲ್ಲ. ಮಳೆ ಇಲ್ಲದ ದಿನಗಳನ್ನು ನೋಡಿಕೊಂಡು ಗದ್ದೆ ಕೊಯ್ಯುವ, ಭತ್ತದ ತೆನೆ ಬಿಡಿಸುವ, ಅಡಕೆ ಕೊಯಿಸುವ ಕೆಲಸ ಮಾಡುತ್ತಾರೆ. ಗದ್ದೆಯಲ್ಲಿರುವ ಭತ್ತದ ತೆನೆಗಳು ನೀರಿನ ರಾಶಿಯಲ್ಲಿ ಮುಳುಗಿ ಹೋದರೆ, ತೇಲಿ ಹೋದರೆ ‘ಏನ್ ಮಾಡಲಿಕ್ಕೆ ಬರುತ್ತದೆ, ನಮ್ ಗ್ರಹಚಾರ’ಎಂದು ಕೂರುತ್ತಾರೆಯೇ ವಿನಾ ಪರಿಹಾರಕ್ಕಾಗಲಿ, ನಿರಂತರ ಅಕಾಲ ಮಳೆಗೆ ಕಾರಣವೇನೆಂದು ವ್ಯವಸ್ಥಿತ ಅಧ್ಯಯನ ಮಾಡುವಂತೆ ಆಗಲಿ ಯಾರ ಮೇಲೆಯೂ ಒತ್ತಡ ಹೇರುವುದಿಲ್ಲ. ಅದೆಲ್ಲ ಇಲ್ಲಿ ಸಾಧ್ಯವಿಲ್ಲವೆಂಬುದು ಅವರ ದೃಢ ನಿರ್ಧಾರ.
ಚಳಿಗಾಲದ ‘ಟೈಟಾನಿಕ್’
ಟೈಟಾನಿಕ್ ಚಿತ್ರ ನೋಡಿದ್ದೀರಾ? ಅದಕ್ಕೂ, ಚಳಿಗಾಲದ ಭಾವನೆಗಳಿಗೂ ನಿಕಟ ಸಂಪರ್ಕ ಇದೆ. ಆ ಚಿತ್ರವನ್ನು ಚಳಿಗಾಲದ ತಣ್ಣಗಿನ ವಾತಾವರಣದಲ್ಲಿ ನೋಡಿದಾಗ ಮಾತ್ರ ಅಲ್ಲಿನ ಹಿಮ ಕೊರೆತದ ಗಾಢಾನುಭವವಾಗಲು ಸಾಧ್ಯ. ಯಾವುದೇ ರೋಮ್ಯಾಂಟಿಕ್ ಭಾವ ಮೂಡದ ಹೊತ್ತಲ್ಲಿ ‘ಟೈಟಾನಿಕ್’ ನೋಡಿದ್ದ ನನಗೆ ಆ ಹಿಮ ಸಮುದ್ರದ ಚಳಿಯೇ ಭಯಂಕರವಾಗಿ ಕಾಡಿತ್ತು. ಪ್ರೇಮಿಗಳು ದೂರವಾದ ದುಃಖಕ್ಕಿಂತ ಮಿಗಿಲಾಗಿ ‘ಪಾಪ, ಅವರೆಲ್ಲ ಆ ಚಳಿಯಲ್ಲಿ, ಕೊರೆಯುವ ನೀರಿನಲ್ಲಿ ಹೇಗಿದ್ದರು?’ಎನ್ನುವುದೇ ದೊಡ್ಡ ವಿಚಾರವಾಗಿತ್ತು. ಹೀಗಾಗಿ, ಕೊರೆಯುವ ಹಿಮ ನೀರಿನ ಅನುಭವ ಗಾಢವಾಗಿ ಮನ ತಟ್ಟಬೇಕೆಂದರೆ ಚಳಿಗಾಲದಲ್ಲೇ ‘ಟೈಟಾನಿಕ್’ ಚಿತ್ರ ನೋಡಬೇಕು ಎನ್ನುವುದು ಇಂದಿಗೂ ನನ್ನ ಬಲವಾದ ನಂಬುಗೆ.
ಚಳಿಗಾಲದ ಬಂಧವೇನಿದ್ದರೂ ಈಗ ನೆನಪು ಮಾತ್ರ. ದಿನವಿಡೀ ಎ.ಸಿ.ರೂಮಿನಲ್ಲಿ ಕುಳಿತುಕೊಳ್ಳುವ ನನಗೆ ಕಾಲದ ಪರಿವೆಯಿಲ್ಲ. ಋತುಮಾನಗಳ ವಿಭಿನ್ನ ಸೊಬಗನ್ನಂತೂ ಕೇಳಲೇಬೇಡಿ. ಊರಿಂದ ಫೋನ್ ಮಾಡುವ ಅಮ್ಮ ‘ಕೆಂಪು ಹರಿವೆ ಚೆನ್ನಾಗಿ ಮೊಳಕೆ ಒಡೆಯುತ್ತಿದೆ’ಎಂದರೂ ಅಷ್ಟೆ, ‘ಊರಿನ ಬಸ್‌ಸ್ಟಾಪ್ ಎದುರೇ ಇರುವ ಎರಡೆರಡು ದೈತ್ಯ ಅರಳೀಮರಗಳು ಕೆಂಪಗೆ ಅರಳಿಕೊಂಡಿವೆ’ಎಂದರೂ ಅಷ್ಟೆ. ಅವಳ ಉತ್ಸಾಹ ಇಲ್ಲಿಯವರೆಗೆ ಹರಿಯವುದಿಲ್ಲ.
Friday 30 December 2011
Subscribe to:
Post Comments (Atom)
Hey Sumana,
ReplyDeleteThis reminds me of my recent trip to Attikoppa...the 'Biting cold'...
Shruthi.