Friday 30 December 2011

ಚಳಿಗೊಂದು ಬಾಲ್ಯದ ಸಲಾಮು
---------------
ದೂರದ ಸ್ವಿಟ್ಜರ್‌ಲ್ಯಾಂಡ್, ಯುರೋಪ್ ದೇಶಗಳು, ನಮ್ಮದೇ ಕಾಶ್ಮೀರ, ಹಿಮಾಲಯಗಳಿಗೆ ಬದುಕಿನಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂದು ಕನಸುವ ಮಂದಿ ನಾವು. ಅಲ್ಲಿನ ಆಕರ್ಷಣೆ ಬೆಳ್ಳಗಿನ ಹಿಮ. ಬಿಸಿಲು ನಾಡಿನ ನಮಗೆ ಅಲ್ಲಿಯ ಉಗ್ರ ಚಳಿಯ ದಿನಗಳ ಕಷ್ಟ ಗೊತ್ತಿಲ್ಲ. ಹೀಗಾಗಿ ಆಕರ್ಷಣೆ ಹೆಚ್ಚು ಎನ್ನುವ ಸತ್ಯ ಗೊತ್ತಿದ್ದರೂ ಹಿಮ ಸೌಂದರ್ಯದ ಪ್ರತೀಕವಾಗಿಯೇ ಕಾಣುತ್ತದೆ.
ಈ ಚಳಿ ಎಂದೊಡನೆ ತಕ್ಷಣ ನೆನಪಾಗುವುದು ಬೆಂಕಿ. ಹಳ್ಳಿಗರಿಗೆ ಈ ಸುಖ ಗೊತ್ತು. ನಮ್ಮ ಮಲೆನಾಡಿನ ಮಂದಿಗಂತೂ ಚಳಿಗಾಲದ ಬೆಂಕಿ ಅತಿ ಆಪ್ತ. ಮಳೆಗಾಲದಲ್ಲಿ ಬೆಂಕಿ ಅನಿವಾರ್ಯವಾದರೆ ಚಳಿಗೆ ಬೆಂಕಿ ಪ್ಯಾಷನ್ ಆಗಿಬಿಡುತ್ತದೆ. ಚಳಿಯ ಮೋಹಕತೆಗೆ ಬೆಂಕಿ ಇನ್ನಷ್ಟು ಕಾವು ನೀಡುತ್ತದೆ. ಹಾಗಂತ ಚಳಿಯ ದಿನಗಳಲ್ಲಿ ಮಲೆನಾಡು ಹೊದ್ದು ಮಲಗಿಬಿಡುವುದಿಲ್ಲ, ವರ್ಷದ ಎಲ್ಲಾ ದಿನಗಳಿಗಿಂತ ಕ್ರಿಯಾಶೀಲವಾಗಿರಬೇಕಾದ ದಿನಗಳು ಇವು. ಏಕೆಂದರೆ ಅಡಕೆ, ಭತ್ತದ ಕೊಯ್ಲು ಇದೆ. ವರ್ಷದ ಒಂದೇ ಒಂದು ಬೆಳೆ ಕೈ ಸೇರುವ ಹೊತ್ತಲ್ಲಿ ಎಷ್ಟು ಚಳಿಯಿದ್ದರೇನು? ಸೋಮಾರಿತನ ಆವರಿಸಲು ಬಿಡುವಂತಿಲ್ಲ.
ಡಿಸೆಂಬರ್‌ನ ಸರಿ ಚಳಿಗಾಲದಲ್ಲಿ ಯಾರ ಮನೆಗೆ ಹೋದರೂ ಅಡಕೆ ಸುಲಿಯುವ ಚಟಪಟ ಸದ್ದು. ಬೆಳಗ್ಗೆ-ಸಂಜೆ ಅಡಕೆ ಒಣಗಿಸುವ ಅಟ್ಟದ ಮೇಲೆ ಬಹುಪಾಲು ಸಮಯ ಕಳೆಯುತ್ತದೆ. ಬಿಸಿಲು ಬರುವ ಹೊತ್ತಿಗೆ ಅಡಕೆ ಒಣಗಿಸುವುದು, ರಾತ್ರಿಯ ಇಬ್ಬನಿಗೆ ತೋಯ್ಯದಿರಲೆಂದು ಮತ್ತೆ ಒಟ್ಟುಗೂಡಿಸಿ ಪ್ಲಾಸ್ಟಿಕ್ಕೋ, ಗೋಣಿತಾಟಿನದ್ದೋ ಹೊದಿಕೆ ಹಾಕುವುದು, ಮತ್ತೆ ಮರುದಿನ ಥಟ್ ಥಟ್ ಎಂದು ತಟ್ಟಿ ತಟ್ಟಿ ಹರವುವುದು...ಸಂಜೆ ಮತ್ತೆ ಒಬ್ಬರಿಸುವುದು. ಹತ್ತಿರದಲ್ಲೇ ಟ್ರಾನ್ಸಿಸ್ಟರ್. ಧಾರವಾಢ ಆಕಾಶವಾಣಿಯಲ್ಲಿ ಸಂಜೆ ೫.೩೦ ಗೆ ಮೂಡಿಬರುವ ‘ಈ ಸೊಗಸಾದ ಸಂಜೆ’ ಹಾಡಿಗೆ ಮೈಮರೆತು ದನಿಗೂಡಿಸುವ ಅಣ್ಣ...
ಶಾಲೆಗೆ ಹೋಗುತ್ತಿದ್ದ ದಿನಗಳು ಅವು. ರಸ್ತೆ ಪಕ್ಕದ ಹುಲ್ಲು ಹಾಸಿನ ಮೇಲೆ ಮಣಿಗಳಂತೆ ಪೋಣಿಸಿಕೊಂಡಿರುತ್ತಿದ್ದ ಇಬ್ಬನಿಯನ್ನು ಹಾರಿಸುತ್ತ, ಹಾರಿಸುತ್ತ ಗೊತ್ತೇ ಆಗದಂತೆ ಯೂನಿಫಾರ್‍ಮ್ ಒದ್ದೆಯಾಗಿ ಹೋಗುತ್ತಿತ್ತು. ಕೆಲವೊಮ್ಮೆ ಆಗಲೇ ಅದನ್ನು ಯಾರೋ ತುಳಿದು ಹೋದ ಮಾರ್ಕು ಕಂಡು ಬೇಸರವಾಗುತ್ತಿತ್ತು. ಅರ್ಧ ಮೈಲು ನಡೆಯುವಷ್ಟರಲ್ಲಿ ಮುಂಗುರುಳು ಮಂಜಿನಲ್ಲಿ ತೋಯ್ದುಹೋಗುತ್ತಿತ್ತು. ರಾತ್ರಿ ಜೇಡ ಕಟ್ಟಿಹೋದ ಬಲೆಗೆ ಮುಖ ಸೋಕಿ ಬಾಯಿಗೆ ಏನೋ ಸಿಹಿ ಸಿಹಿ ಅಂಟಂಟು..ಈ ಸಮಯದಲ್ಲಿ ಬೀಳುವ ಇಬ್ಬನಿಯ್ನು ನೋಡಿಯೇ ಅಪ್ಪ ಹೇಳುತ್ತಿದ್ದ ‘ಈ ಬಾರಿ ಮಾವಿನಕಾಯಿ ಚೆನ್ನಾಗಿ ಕಚ್ಚುತ್ತದೆ’ಎಂದು. ಆದರೆ ಶಿಂಗಾರದೊಳಗೆ ಅಡಗಿ ಕೂತ ಅಡಕೆ ಮರಿಗಳು ಮಾತ್ರ ಬೆಳಗಿನ ಹೊತ್ತು ಪಟಪಟ ಬೀಳುತ್ತಿದ್ದಾಗ ‘ಓಹೋ ಇಬ್ಬನಿ ಹೆಚ್ಚಾಯ್ತು’ಎನ್ನುವರು.
ಅಂತಹ ಚಳಿಗಾಲದಲ್ಲೊಂದು ದಿನ ಬೆಳ್ಳಂಬೆಳಗ್ಗೆ ದೇವರಿಗೆ ಹೂವು ಕೊಯ್ದು ಬಂದು ಯೂನಿಫಾರಂಗೆ ಐರನ್ ಮಾಡಲು ಹೋಗಿ ಪೂರ್ತಿ ಸುಟ್ಟುಕೊಂಡಿದ್ದೆ. ಚಳಿಗೆ ಮರಗೆಟ್ಟಿದ್ದ ಕೈಗಳಿಗೆ ಐರನ್‌ಬಾಕ್ಸ್ ಕಾದ ಸಮಾಚಾರವೇ ಗೊತ್ತಾಗಿರಲಿಲ್ಲ. ಬಿಳಿ ಬಣ್ಣದ ಅಂಗಿಯ ಅರೆ ಸುಟ್ಟುಹೋಗಿದ್ದ ಜಾಗಕ್ಕೆ ಮತ್ತೊಂದು ಅಂಗೈಯಗಲದ ಬಿಳಿ ಬಟ್ಟೆ ಸೇರಿಸಿ ಹೊಲಿದುಕೊಟ್ಟಿದ್ದಳು ಅಮ್ಮ. ಅದರಲ್ಲೇ ಆ ವರ್ಷದ ಶಾಲೆ ಪೂರೈಸಿತ್ತು. ದೇವರ ಪೂಜೆಗೆ ಹೂವು ಸೇರಿಸುವುದು ಮುಂಜಾವಿನ ದೊಡ್ಡ ಕೆಲಸ ಚಳಿಯಲ್ಲಿ. ಗಿಡ-ಮರಗಳು ಚಳಿಯ ಅಬ್ಬರಕ್ಕೆ ಬೆಕ್ಕಸಬೆರಗಾಗಿ ಮೈ ಬರಿದು ಮಾಡಿಕೊಂಡು ನಿಂತುಬಿಡುವಾಗ ಹೂವೆಲ್ಲಿ? ಯಾವಾಗಲೂ ಬಿಡುವ ಪುಟ್ಟ ತುಂಬೆ, ಅಲ್ಲೊಂದು ಇಲ್ಲೊಂದು ಕಾಣುವ ಶಂಖಪುಷ್ಪ, ದೂರ್ವೆ, ತುಳಸಿಯೇ ಗತಿ. ಅದು ಬಿಟ್ಟರೆ ಗದ್ದೆಯಂಚಿಗೆ ಹಿಂಡುಹಿಂಡಾಗಿ ಬೆಳೆದ ಬಳ್ಳಿಯಿಂದ ಅಚ್ಚ ಹಳದಿಯ ಕೋಟೆ ಹೂವು, ಕೆಂಪು ಹಾಗೂ ಗಂಧದ ಬಣ್ಣದ ಬಾಲದಾಸವಾಳ ಕೊಯ್ಯಲು ಹೋಗುವುದು ಭಾನುವಾರ ಮಾತ್ರ. ಅಕ್ಕಪಕ್ಕದ ಮರಗಳನ್ನು ಬಳಸಿ ನಿಂತ ಆ ಹಿಂಡಿನ ಹತ್ತಿರ ಕಷ್ಟಪಟ್ಟು ಹೋದರೆ ಸಿಗುವುದು ನಾಲ್ಕಾರು ಹೂವುಗಳು ಮಾತ್ರ. ಆದರೂ ಕೊಯ್ಯಲೇಬೇಕು.
ಸುಲಿದ ಅಡಕೆ ಬೇಯಿಸಲೆಂದು ರಾತ್ರಿ ಹಂಡೆ ನೀರು ಕಾಯಿಸಲು ದೊಡ್ಡ ಉರಿ ಹಾಕಿದ ಅಪ್ಪ ಊಟ ಮುಗಿಸಿ ಬರುವುದರೊಳಗೆ ಅದರ ಎದುರು ಗೋಣಿತಾಟೊಂದನ್ನು ಹಾಕಿ ಅಲ್ಲಿಯೇ ಹೋಂವರ್ಕ್ ಸಂಭ್ರಮ. ಕೌದಿಯಡಿ ಬೆಚ್ಚಗೆ ಮಲಗಿದರೂ ಕೈಕಾಲುಗಳು ಬೆಚ್ಚಗಾಗುವಷ್ಟರಲ್ಲಿ ಉಚ್ಚೆ ಬಂದಂತಾಗಿ, ಹೋಗಿ ಬರುವ ಹೊತ್ತಿಗೆ ಮತ್ತೆ ಕೈಕಾಳುಗಳು ಮರಗಟ್ಟುವ ಆಟ ಶುರುವಾಗಿ ಸಿಹಿ ನಿದ್ದೆ. ಚಳಿಯ ಭಾನುವಾರದ ಚಿತ್ರಣ ಬೇರೆ. ಮಕ್ಕಳು ಶಾಲೆಗೆ ಹೋಗುತ್ತಾರೆಂಬ ಗಡಿಬಿಡಿಯಿಲ್ಲ. ಆದರೂ ಹೊತ್ತಿಗೆ ಸರಿಯಾಗಿ ತಿಂಡಿಯಂತೂ ಆಗುತ್ತಿತ್ತು. ಬಚ್ಚಲೊಲೆಯ ಬೆಂಕಿ ಧಗಿಸುತ್ತಿದ್ದಂತೆ ಅಮ್ಮನ ಎಣ್ಣೆ ಸ್ನಾನದ ಕಾರ್ಯ ಶುರು. ಸೀಗೆಕಾಯಿ ಪುಡಿ, ಮತ್ತಿಲೋಳೆ ಹಾಕಿ ನೆನೆಸಿಟ್ಟ ನೀರು ತಣ್ಣಗೆ ಕೊರೆದು ತಲೆಯಿಂದ ಇಳಿಯುವ ದಾರಿಯಲ್ಲೆಲ್ಲ ಚಿಕ್ಕ ನಡುಕ. ನಂತರ ಹಬೆಯಾಡುವ ಬಿಸಿನೀರಿಗೆ ತಲೆಯೊಡ್ಡಿದರೆ ಅಲ್ಲೇ ಕುಸಿದುಬೀಳುವಷ್ಟು ನಿದ್ರೆ. ಕೂದಲನ್ನು ಒಣಗಿಸುವ ನೆಪವಾಗಿಟ್ಟು ಅಟ್ಟ ಹತ್ತಿ ಬಿಸಿಲಿಗೆ ಕುಳಿತರೆ ತೂಕಡಿಕೆ, ಚಿಕ್ಕ-ಪುಟ್ಟ ಹಕ್ಕಿಗಳ ಚಿಲಿಪಿಲಿ ಸಂಭ್ರಮದ ಜೋಗುಳ.
ಚಳಿಯೆಂದರೆ ಒಳಗೆ ಏನೋ ಅರಳುತ್ತದೆ. ಪಕ್ಕಾ ಪ್ರಕೃತಿಯಂತೆ. ಮರವೆಲ್ಲ ಎಲೆಗಳನ್ನುದುರಿಸಿ ಬಟಾಬಯಲಾದರೂ ಅಲ್ಲಿಯೇ ಕೆಂಪು ಕೆಂಪು ಚಿಗುರು ಸಾಲಾಗಿ ಹುಟ್ಟುತ್ತ ಜಗದ ನಿಯಮವನ್ನು ಸಾರುತ್ತವೆ. ಅಂತಹುದ್ದೇ ಕಠೋರ ಚಳಿಯಲ್ಲಿ ಅಜ್ಜ ಮುರುಟಿ ಮುರುಟಿಕೊಂಡೇ ಪ್ರಾಣ ತೆತ್ತಿದ್ದು. ಪದರು ಪದರಾಗಿ, ಸುಕ್ಕಾಗಿದ್ದ ಆತನ ಮೈಕೈ ಚರ್ಮ ಬೆಚ್ಚಗಿದೆ ಎನಿಸುತ್ತಿತ್ತು. ಅವನ ಹಳೆಯ ಶಾಲಿನಡಿ ನಮ್ಮ ಕೈಕಾಲುಗಳನ್ನೂ ತೂರಿಸುತ್ತಿದ್ದೆವು. ಆದರೆ, ಚಳಿಗೆ ಜೀವ ಮರಗಟ್ಟುತ್ತಿದೆ ಎಂದು ಹೊತ್ತಾಗಲೇ ಇಲ್ಲ. ಅಂವ ದಮ್ಮು ಹೆಚ್ಚಾಗಿ ಕೆಮ್ಮುತ್ತಿದ್ದ ದಿನಗಳನ್ನೂ ಚಳಿಗಾಲ ಅಡಗಿಸಿಟ್ಟುಕೊಂಡಿದೆ. ಸಂಜೆ ಆರಕ್ಕೆ ಪ್ರಾಣ ಬಿಟ್ಟ ಅಜ್ಜನಿಗೂ, ಅದೇ ದಿನ ಸಂಜೆ ೬.೩೦ ಗೆ ಅತ್ತಿಗೆಯ ಹೊಟ್ಟೆಯಿಂದ ಜನ್ಮ ತಳೆದ ಪಾಪು ಪುಟ್ಟಿಗೂ ಚಳಿಗಾಲದ ಮುಹೂರ್ತ ನಿಕ್ಕಿಯಾಗಿದ್ದು ಯಾವ ಮಾಯೆಯೋ?
ಅಪ್ಪನ ಆರೋಗ್ಯವಂತೂ ಕೈಕೊಡುವುದು ಯಾವತ್ತೂ ಚಳಿಗಾಲದಲ್ಲಿಯೆ. ನಾನಾಗ ಎಸ್‌ಎಸ್‌ಎಲ್‌ಸಿಯಲ್ಲಿದ್ದ ಸಮಯ. ರಕ್ತದ ವಾಂತಿ ಮಾಡಿಕೊಳ್ಳುತ್ತ ಬಸ್‌ಸ್ಟಾಪಿನಲ್ಲಿ ಅನಾಥವಾಗಿ ಮಲಗಿಕೊಂಡಿದ್ದ ಅಪ್ಪನನ್ನು ಕಂಡ ಯಾರೋ ಪುಣ್ಯಾತ್ಮರು ಮನೆಗೆ ಕರೆತಂದಿದ್ದರು. ಆಗ ಎಚ್ಚರವಾದಾಗ ನನ್ನ ಬೆನ್ನು ಸವರಿ ‘ನೀವಿನ್ನೂ ಚಿಕ್ಕವರು’ಎಂದು ಆಸ್ಪತ್ರೆಗೆ ಹೋಗಿದ್ದ ಅಪ್ಪನ ಮುಖಭಾವ ಇನ್ನೂ ಮರೆತಿಲ್ಲ. ಅದಾಗಿ ಕೆಲವು ವರ್ಷಗಳ ಬಳಿಕ ನಾನು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ಹಾರುವ ಸಂಭ್ರಮದಲ್ಲಿದ್ದೆ. ಅದನ್ನು ಮನೆಗೆ ಫೋನ್ ಮಾಡಿ ಹೇಳಿಯೂ ಇದ್ದೆ. ಅಪ್ಪನೂ ಖುಷಿಪಟ್ಟಿದ್ದ. ನಾಳೆ ಇನ್ನೇನು ಡ್ಯೂಟಿಗೆ ಜಾಯಿನ್ ಆಗಬೇಕು, ಅವತ್ತು ಹಿಂದಿನ ರಾತ್ರಿ ಅಪ್ಪನಿಗೆ ಬಿಪಿ ಹೆಚ್ಚಾಗಿ ಪಾರ್ಶ್ವವಾಯು ಬಂದು ಅಪ್ಪಳಿಸಿತ್ತು. ದುರಂತವೆಂದರೆ, ನನಗೆ ಗೊತ್ತಾಗಿದ್ದುದು ಸಹ ಮರುದಿನವೆ. ಆಗ ತಕ್ಷಣ ಊರಿಗೆ ಹೋಗದೆ ಕರ್ತವ್ಯದಿಂದ ಹಿಂದೆ ಉಳಿದೆ ಎಂದು ಈಗಲೂ ಕೆಲವೊಮ್ಮೆ ಕಾಡುತ್ತದೆ. ಈಗ ಅಪ್ಪ ಸುಧಾರಿಸಿಕೊಂಡಿದ್ದಾನೆ. ಆದರೂ ಚಳಿಯೆಂದರೆ ಜೀವಕ್ಕೆ ಹಿಂಸೆಯಾಗುತ್ತದೆ ಎನ್ನುತ್ತಾನೆ. ಎಷ್ಟೊಂದು ಆಯಾಮಗಳು ಚಳಿಗೆ!
ಇತ್ತೀಚೆಗೆ ಮಲೆನಾಡಿನ ಚಿತ್ರಣ ಬದಲಾಗಿದೆ. ಮನೆಗಳಲ್ಲಿ ಆಡುವ ಮಕ್ಕಳು ಕಡಿಮೆ. ರಟ್ಟೆ ಮುರಿದು ಕೆಲಸ ಮಾಡುವ ಯುವ ಪೀಳಿಗೆಯಂತೂ ಇಲ್ಲವೇ ಇಲ್ಲ. ಪ್ರತೀ ಮನೆಯಲ್ಲೂ ವಯಸ್ಸಾದವರು ನಿಧಾನ ಓಡಾಡಿಕೊಂಡು ಬಿಸಿಲು ಬರುತ್ತಿದ್ದಂತೆ ‘ಸ್ವಲ್ಪ ಚಳಿ ಕಾಯಿಸಿ ಮುಂದಿನ ಕೆಲಸ ನೋಡೋಣ’ ಎನ್ನುತ್ತಾರೆ. ಭಾನುವಾರವಾದರೆ ಅಷ್ಟೊತ್ತಿಗೆ ಬೆಂಗಳೂರಿನಲ್ಲಿರುವ ಮಗಳ ಫೋನ್ ಕರೆದಿರುತ್ತದೆ. ಮೊಮ್ಮಕ್ಕಳೊಡನೆ ಮಾತನಾಡಿ ಬರುವಷ್ಟರಲ್ಲಿ ಬಿಸಿಲು ನೆತ್ತಿಗೇರಿರುತ್ತದೆ.
ಅಷ್ಟಕ್ಕೂ ಮಲೆನಾಡಿನಲ್ಲೀಗ ವರ್ಷದ ಆರು ತಿಂಗಳು ಮಳೆಗಾಲ. ಈ ವಾತಾವರಣ ಕಳೆದ ನಾಲ್ಕು ವರ್ಷಗಳಿಂದ ಕೊಡುಗೆಯಾಗಿ ಬಂದಿದೆ. ಇದಕ್ಕೆ ವೈಜ್ಞಾನಿಕ ಕಾರಣ ಯಾರಿಗೂ ಗೊತ್ತಿಲ್ಲ. ಸ್ಥಳೀಯರು ಮಾತ್ರ ಒಬ್ಬೊಬ್ಬರು ಒಂದೊಂದು ಕತೆ ಹೇಳುತ್ತಾರೆ. ‘ಕೈಗಾ ಪರಮಾಣು ಸ್ಥಾವರ ಬಂದ ಮೇಲೆ ಹೀಗಾಯ್ತು’ಅನ್ನುವವರೂ ಇದ್ದಾರೆ. ಒಟ್ಟಿನಲ್ಲಿ ಹಿಂದಿನ ಚಳಿಗಾಲದ ಕಾವು ಎದೆಯಲ್ಲಿ ಮೂಡುವುದಿಲ್ಲ. ಮಳೆ ಇಲ್ಲದ ದಿನಗಳನ್ನು ನೋಡಿಕೊಂಡು ಗದ್ದೆ ಕೊಯ್ಯುವ, ಭತ್ತದ ತೆನೆ ಬಿಡಿಸುವ, ಅಡಕೆ ಕೊಯಿಸುವ ಕೆಲಸ ಮಾಡುತ್ತಾರೆ. ಗದ್ದೆಯಲ್ಲಿರುವ ಭತ್ತದ ತೆನೆಗಳು ನೀರಿನ ರಾಶಿಯಲ್ಲಿ ಮುಳುಗಿ ಹೋದರೆ, ತೇಲಿ ಹೋದರೆ ‘ಏನ್ ಮಾಡಲಿಕ್ಕೆ ಬರುತ್ತದೆ, ನಮ್ ಗ್ರಹಚಾರ’ಎಂದು ಕೂರುತ್ತಾರೆಯೇ ವಿನಾ ಪರಿಹಾರಕ್ಕಾಗಲಿ, ನಿರಂತರ ಅಕಾಲ ಮಳೆಗೆ ಕಾರಣವೇನೆಂದು ವ್ಯವಸ್ಥಿತ ಅಧ್ಯಯನ ಮಾಡುವಂತೆ ಆಗಲಿ ಯಾರ ಮೇಲೆಯೂ ಒತ್ತಡ ಹೇರುವುದಿಲ್ಲ. ಅದೆಲ್ಲ ಇಲ್ಲಿ ಸಾಧ್ಯವಿಲ್ಲವೆಂಬುದು ಅವರ ದೃಢ ನಿರ್ಧಾರ.
ಚಳಿಗಾಲದ ‘ಟೈಟಾನಿಕ್’
ಟೈಟಾನಿಕ್ ಚಿತ್ರ ನೋಡಿದ್ದೀರಾ? ಅದಕ್ಕೂ, ಚಳಿಗಾಲದ ಭಾವನೆಗಳಿಗೂ ನಿಕಟ ಸಂಪರ್ಕ ಇದೆ. ಆ ಚಿತ್ರವನ್ನು ಚಳಿಗಾಲದ ತಣ್ಣಗಿನ ವಾತಾವರಣದಲ್ಲಿ ನೋಡಿದಾಗ ಮಾತ್ರ ಅಲ್ಲಿನ ಹಿಮ ಕೊರೆತದ ಗಾಢಾನುಭವವಾಗಲು ಸಾಧ್ಯ. ಯಾವುದೇ ರೋಮ್ಯಾಂಟಿಕ್ ಭಾವ ಮೂಡದ ಹೊತ್ತಲ್ಲಿ ‘ಟೈಟಾನಿಕ್’ ನೋಡಿದ್ದ ನನಗೆ ಆ ಹಿಮ ಸಮುದ್ರದ ಚಳಿಯೇ ಭಯಂಕರವಾಗಿ ಕಾಡಿತ್ತು. ಪ್ರೇಮಿಗಳು ದೂರವಾದ ದುಃಖಕ್ಕಿಂತ ಮಿಗಿಲಾಗಿ ‘ಪಾಪ, ಅವರೆಲ್ಲ ಆ ಚಳಿಯಲ್ಲಿ, ಕೊರೆಯುವ ನೀರಿನಲ್ಲಿ ಹೇಗಿದ್ದರು?’ಎನ್ನುವುದೇ ದೊಡ್ಡ ವಿಚಾರವಾಗಿತ್ತು. ಹೀಗಾಗಿ, ಕೊರೆಯುವ ಹಿಮ ನೀರಿನ ಅನುಭವ ಗಾಢವಾಗಿ ಮನ ತಟ್ಟಬೇಕೆಂದರೆ ಚಳಿಗಾಲದಲ್ಲೇ ‘ಟೈಟಾನಿಕ್’ ಚಿತ್ರ ನೋಡಬೇಕು ಎನ್ನುವುದು ಇಂದಿಗೂ ನನ್ನ ಬಲವಾದ ನಂಬುಗೆ.
ಚಳಿಗಾಲದ ಬಂಧವೇನಿದ್ದರೂ ಈಗ ನೆನಪು ಮಾತ್ರ. ದಿನವಿಡೀ ಎ.ಸಿ.ರೂಮಿನಲ್ಲಿ ಕುಳಿತುಕೊಳ್ಳುವ ನನಗೆ ಕಾಲದ ಪರಿವೆಯಿಲ್ಲ. ಋತುಮಾನಗಳ ವಿಭಿನ್ನ ಸೊಬಗನ್ನಂತೂ ಕೇಳಲೇಬೇಡಿ. ಊರಿಂದ ಫೋನ್ ಮಾಡುವ ಅಮ್ಮ ‘ಕೆಂಪು ಹರಿವೆ ಚೆನ್ನಾಗಿ ಮೊಳಕೆ ಒಡೆಯುತ್ತಿದೆ’ಎಂದರೂ ಅಷ್ಟೆ, ‘ಊರಿನ ಬಸ್‌ಸ್ಟಾಪ್ ಎದುರೇ ಇರುವ ಎರಡೆರಡು ದೈತ್ಯ ಅರಳೀಮರಗಳು ಕೆಂಪಗೆ ಅರಳಿಕೊಂಡಿವೆ’ಎಂದರೂ ಅಷ್ಟೆ. ಅವಳ ಉತ್ಸಾಹ ಇಲ್ಲಿಯವರೆಗೆ ಹರಿಯವುದಿಲ್ಲ.

Sunday 22 May 2011

ನೆಲೆ

ನನ್ನವನ ತೃಪ್ತಿ ಸಮಾಧಾನಗಳಲ್ಲಿ
ನಾನು ಕಾಣುವ ಕೊರತೆ
ನನ್ನ ಆಕಾಶದೆತ್ತರದ ಬಯಕೆಗಳಿಗೆ
ಅವನು ತೋರುವ ನಿರ್ಲಿಪ್ತತೆ
ಸದಾ ಹೊಸತರ ಬೆರಗನ್ನು ಬಯಸುವ
ನನ್ನ ಕಣ್ಣುಗಳು
ಏನೋ ಪಡೆದ ಆರಾಮದಲ್ಲಿ
ಕಳೆಗಟ್ಟುವ ಅವನ ಕಣ್ಣುಗಳು
ಎಲ್ಲದರಲ್ಲಿಯೂ ಕೊಂಕು
ಹುಡುಕುವ ಅವನು
ಜಗತ್ತಿನ ಹಸಿರೆಡೆಗೆ ದೃಷ್ಟಿ
ಹಾಯಿಸುವ ನಾನು....
ಎಲ್ಲೆಲ್ಲೂ ತಾಳಮೇಳವಿಲ್ಲದೇ ನಾ ಬಳಲಿದಾಗ
ಅವನೇ ತೋರಿಸುತ್ತಾನೆ
‘ಅಲ್ಲಿ ನೋಡು ಚಂದಿರ’.

ಯಾವುದು ಭರತ?
ಯಾವುದು ಇಳಿತ?
ನನ್ನ ಕನಸುಗಳೆತ್ತರ ಅವನು ಏರುವುದೋ?
ಅವನ ಶಾಂತಿಗೆ ನಾನು ತಲೆಬಾಗುವುದೋ?
ಮಗುವಾದ ಬಳಿಕ ಸ್ಮಾರ್ಟ್
‘ಒಂದು ಮಗು ಆಗಿದ್ದೇ ಆಗಿದ್ದು, ಎಷ್ಟು ಸೋಮಾರಿಯಾಗಿ ಜೀವನ ಕಳೆಯುತ್ತಿದ್ದ ಆಕೆ ಹೇಗೆ ಆಕ್ಟಿವ್ ಆಗಿಬಿಟ್ಟಿದ್ದಾಳೆ? ಇದೇ ಮಗುವಿನ ಮಹಿಮೆ’ ಎಂಬ ಡೈಲಾಗ್ ಅನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಆದರೆ, ಸ್ವಾಮಿ, ಅದು ಮಗುವಿನ ಮಹಿಮೆಯಲ್ಲ, ಅದು ಮೆದುಳಿನಲ್ಲಾದ ಬದಲಾವಣೆ.
ಮಗುವಾದ ಬಳಿಕ ಮಹಿಳೆ ಮೊದಲಿನಂತೆ ಇರಲು ಸಾಧ್ಯವೇ ಇಲ್ಲ ಬಿಡಿ. ಅದು ಎಲ್ಲರಿಗೂ ಗೊತ್ತು. ಮೊದಲಿನಂತೆ ಸೊಂಪಾಗಿ ನಿದ್ದೆ ಹೊಡೆಯಲು, ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸಲು ಆಗುವುದಿಲ್ಲ. ಬೇರೆಯವರನ್ನು ಅಷ್ಟೇ ಏಕೆ, ಗಂಡನನ್ನೂ ಸಹ ಸರಿಯಾಗಿ ವಿಚಾರಿಸಿಕೊಳ್ಳಲು ಆಗುವುದಿಲ್ಲ. ಅಷ್ಟು ಕೆಲಸದ ಹೊರೆ ಆಕೆಗೆ ಇರುತ್ತದೆ. ಇನ್ನು ಹೊರಗೆ ಕಚೇರಿಯಲ್ಲಿ ದುಡಿಯುವ ಮಹಿಳೆಯ ಪಾಡಂತೂ ಇನ್ನೂ ಗಂಭೀರ.
ಆದರೆ, ಇಷ್ಟೆಲ್ಲ ಜವಾಬ್ದಾರಿ ಹೊತ್ತುಕೊಳ್ಳುವ, ಕೆಲಸ ಮಾಡುವ ತಾಕತ್ತು ಆಕೆಗೆಲ್ಲಿಂದ ಬರುತ್ತದೆ? ಗೊತ್ತಾ? ಅದೇ ನಿಜವಾದ ಆಕೆಯ ಶಕ್ತಿಯ ಗುಟ್ಟು.
ಗರ್ಭಿಣಿಯಿದ್ದಾಗ ಹಾರ್ಮೋನ್‌ಗಳಲ್ಲಿ ಆಗುವ ಬದಲಾವಣೆಗಳಿಂದ ಮಗು ಹುಟ್ಟಿದ ಬಳಿಕ ಮಹಿಳೆಯ ಮೆದುಳಿನ ನಿರ್ದಿಷ್ಟ ಭಾಗ ಸ್ವಲ್ಪ ದೊಡ್ಡದಾಗುತ್ತದೆ. ಅದರಿಂದಲೇ ಇಷ್ಟೆಲ್ಲ ಸಾಧ್ಯವಾಗುತ್ತದೆ.
ಕ್ರಿಯಾಶೀಲವಾಗಿ ಚಿಂತಿಸುವ, ಸೂರ್ತಿ ಪಡೆಯುವ, ನ್ಯಾಯಅನ್ಯಾಯಗಳ ವಿವೇಚನೆ ಮಾಡುವ ಹಾಗೂ ತೃಪ್ತಿ ಕಾಣುವ ಮೆದುಳಿನ ಭಾಗ ಹೆರಿಗೆ ನಂತರದ ದಿನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳವಣಿಗೆ ಆಗುತ್ತದೆ. ಇದನ್ನು ಯೇಲ್ ವಿಶ್ವವಿದ್ಯಾಲಯದ ತಜ್ಞರು ಪತ್ತೆ ಮಾಡಿದ್ದಾರೆ. ಹೀಗಾಗಿ ಎಲ್ಲವನ್ನೂ ನಿಭಾಯಿಸುವ, ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುವ ತಾಕತ್ತು ಆಕೆಗೆ ಬರುತ್ತದೆ.
ಹಾಗಾದ್ರೆ, ಸುಮ್ಮನೆ ತನ್ನ ಪಾಡಿಗೆ ತಾನಿರುವ, ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ಹುಡುಗಿ ನೋಡಿ ‘ಮಗುವಾದರೆ ಎಲ್ಲ ಸರಿ ಹೋಗುತ್ತೆ ಬಿಡಿ’ಎಂದು ರಾಗ ಹಾಡುವ ಹಿರಿಯರಿಗೆ ಈ ಗುಟ್ಟು ಗೊತ್ತಿದೆಯಾ? ಏನೋ ಗೊತ್ತಿಲ್ಲ.

ಫುಲ್ ಖುಷ್!
ಮಗುವಾದ ಬಳಿಕ ಅಮ್ಮ ಹೆಚ್ಚು ಸ್ಮಾರ್ಟ್ ಆಗುತ್ತಾಳೆ ಅಂತ ಒಂದು ಸಮೀಕ್ಷೆ ಹೇಳ್ತಾ ಇದ್ರೆ, ಇನ್ನೊಂದು ಅಧ್ಯಯನ ಆಕೆ ಹೆಚ್ಚು ಸಂತಸವಾಗಿಯೂ ಇರ‍್ತಾಳೆ ಅಂತ ಹೇಳ್ತಾ ಇದೆ. ಗೊತ್ತಾ?
ಮಗುವಿನ ಲಾಲನೆ-ಪಾಲನೆಯಲ್ಲಿ ನಿರತರಾಗುವ ಅಮ್ಮನ ಮೆದುಳು ಸಂತಸದಿಂದ ಬೀಗುತ್ತದೆಯಂತೆ. ಅದಕ್ಕೇ ಸಂತಸದ ಹಾರ್ಮೋನ್ ಹೆಚ್ಚಾಗಿ ಸ್ರವಿಕೆ ಆಗುತ್ತದೆಯಂತೆ. ಹಾಗಂತ ಬಿಹೇವಿಯರಲ್ ನ್ಯೂರೋ ಸೈನ್ಸ್ ಪತ್ರಿಕೆ ವರದಿ ಮಾಡಿದೆ.
ಮಗುವಿನ ಜವಾಬ್ದಾರಿ ಒಂದೆಡೆಯಾದರೆ, ಅದರ ಹತ್ತಾರು ಕೆಲಸ ಇನ್ನೊಂದೆಡೆ ಇರುತ್ತದೆ. ಆದರೂ ಆಕೆ ಬೇಸರಿಸಿಕೊಳ್ಳುವುದಿಲ್ಲ. ಮತ್ತು ಮಗುವಿನ ಪ್ರತೀ ಕೆಲಸ ಮಾಡುವಾಗಲೂ ಒಂದು ರೀತಿಯ ಸಂತಸ ಅನುಭವಿಸುತ್ತಾಳೆ. ಇದೇ ಆಕೆ ಹೆಚ್ಚು ಕಾಲ ಖುಷಿಯಾಗಿ ಇರುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.
ನಾವೆಷ್ಟು ಬೇಗ ಮೋಸ ಹೋಗುತ್ತೇವೆ?
ಆತ ಕ್ರಿಯಾಶೀಲ ಪ್ರಯೋಗಶಾಲಿ. ಹೆಸರು ಈಗಲ್ ರಾಕ್ ಜ್ಯೂನಿಯರ್ ಹೈ. ಪ್ರಯೋಗ ಮಾಡುತ್ತಲೇ ಇರುವುದು ಸ್ವಭಾವಸಿದ್ಧ ಹವ್ಯಾಸ.
ಜಂಕ್‌ಫುಡ್ ಹಾಗೂ ಕೆಲವು ರಸಾಯನಿಕಗಳ ಬಗ್ಗೆ ನಾವೆಷ್ಟು ಸೂಕ್ಷ್ಮರಾಗಿದ್ದೇವೆ ಎನ್ನುವುದನ್ನು ಆತ ಸಾಬೀತುಪಡಿಸಿದ ಆತನ ಪ್ರೊಜೆಕ್ಟ್‌ಗೆ ಪ್ರತಿಷ್ಠಿತ ಇಡಾಹೋ ಫಾಲ್ಸ್ ಸೈನ್ಸ್ ಫೇರ್‌ನಲ್ಲಿ ಮೊದಲ ಬಹುಮಾನ ಬಂತು.
ಆತನ ಪ್ರೊಜೆಕ್ಟ್ ವಿವರ ಹೀಗಿದೆ.
* ಒಂದು ರಸಾಯನಿಕವಿದೆ. ಅದರ ಹೆಸರು ಡಿಹೈಡ್ರೊಜೆನ್ ಮೊನೊಕ್ಸೈಡ್. ಅದರ ಹಾನಿಗಳು ಅಪಾರ.
* ಇದರಿಂದ ಅತಿಯಾದ ಬೆವರು ಬರುತ್ತದೆ ಮತ್ತು ವಾಕರಿಕೆಯೂ ಹೆಚ್ಚು.
* ಆಸಿಡ್ ಮಳೆಯಲ್ಲಿ ಇದರ ಅಂಶವೇ ಹೆಚ್ಚು.
* ಇದರೊಂದಿಗೆ ಇತರ ಅಂಶಗಳು ಸೇರಿದರೆ ಅನೇಕ ರೋಗಗಳೂ ಬರಬಹುದು.
* ಅಕಸ್ಮಾತ್ತಾಗಿ ಉಸಿರಿನೊಳಗೆ ಸೇರಿದರೆ ಸಾವು ಗ್ಯಾರೆಂಟಿ.
* ಭೂಸವೆತಕ್ಕೂ ಇದು ಪ್ರಮುಖ ಕಾರಣ.
* ಆಟೊಮೊಬೈಲ್‌ನ ಕಾರ್ಯಕ್ಷಮತೆ ಕುಂದಲು ಇದೇ ಕಾರಣ.
* ಕ್ಯಾನ್ಸರ್ ಗಡ್ಡೆಗಳಲ್ಲೂ ಇದು ಇರುತ್ತದೆ.

ಈಗ ಹೇಳಿ. ಈ ರಸಾಯನಿಕವನ್ನು ನಿಷೇಸುವುದೋ ಬೇಡವೋ ಎಂದು ಆತ ೫೦ ಜನರನ್ನು ಪ್ರಶ್ನಿಸಿದಾಗ ೪೩ ಮಂದಿ ನಿಷೇಸುವುದಕ್ಕೆ ಸಹಮತ ಸೂಚಿಸುತ್ತಾರೆ. ೬ ಮಂದಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನುಳಿದ ಒಬ್ಬರಿಗೆ ಮಾತ್ರ ಆ ಗುಟ್ಟು ಗೊತ್ತಿರುತ್ತದೆ.
ಅಷ್ಟಕ್ಕೂ ಆ ರಸಾಯನಿಕ ಯಾವುದು ಗೊತ್ತಾ? ನೀರು. ಈ ಪ್ರೊಜೆಕ್ಟ್‌ಗೇ ಆತ ಮೊದಲ ಬಹುಮಾನ ಪಡೆದಿದ್ದು. ಅದರ ಟೈಟಲ್ ‘ನಾವೆಷ್ಟು ಬೇಗ ಮೋಸ ಹೋಗುತ್ತೇವೆ?’ಎಂದು.

Friday 29 April 2011

ನನ್ನ ನಗು

ಕಾಡುವ ನೆನಪೀಗ ಬೆಂಕಿಯಾಗುವುದಿಲ್ಲ.
ಅವನ ಸನಿಹ ಇದ್ದರೂ ಆಯಿತು..ಇಲ್ಲದಿದ್ದರೂ ಸರಿ.
ಮಗುವಿನ ಸರಿಹೊತ್ತಿನ ನಗು ಕಾಣಿಸುವುದಿಲ್ಲ.
ದಡ ಮುಟ್ಟುವವರೆಗೆ ದನಿಯೆತ್ತದ ನಿಯಮ ನಾನೇ ಹೇರಿಕೊಂಡಿದ್ದು.
ಗೆಳತಿಯ ಆರೈಕೆ ಮನತಟ್ಟುವುದಿಲ್ಲ.
ನಗುವಿಗೆ ಗಟ್ಟಿ ಕಾರಣಗಳೇ ಬೇಕು.

ಕಳೆದುಕೊಂಡಿದ್ದೇನೆ..ನೆನಪುಗಳ
ಅರ್ಥವಾಗದ ಮಾತು-ಮೌನದ ಸುತ್ತ ಬೆಸೆವ ಬಂಧಗಳ
ಅದು ಸೃಜಿಸುವ ಭಾವಗಳ.
ನಗುತ್ತ, ನಗಿಸುತ್ತ ಹಗುರವಾಗುವ ನೋವುಗಳ.
ಕಳೆದುಹೋಗಿದ್ದೇನೆ..ಸತ್ಯಕ್ಕೆ
ಮುಖ ಕೊಡುವ ಧೈರ್ಯ ನನ್ನಲ್ಲಿಲ್ಲ.
ಮಧುರ ಭಾವ..ನನ್ನೀಗ ಕಂಗೆಡಿಸುವುದಿಲ್ಲ.

Wednesday 20 April 2011

ಅಮ್ಮ ನೀ ದೇವರು

ಮೈಕ್ರೊಸಾಫ್ಟ್ ಧೋನಿ!
---------------
ಅಮ್ಮಾ...ನೀ ನನ್ನ ದೇವರು

ಮಕ್ಕಳಿಗೆ ಅಮ್ಮನ ಮಾತೆಂದರೆ ವೇದವಾಕ್ಯ. ಅದು ಸರಿಯೋ, ತಪ್ಪೋ, ಸುಳ್ಳೋ, ಸತ್ಯವೋ ಎಂಬ ಅರಿವು ಅವರಿಗೆ ಇರುವುದಿಲ್ಲ. ಒಟ್ಟಿನಲ್ಲಿ ಅಮ್ಮ ಏನಾದರೂ ಹೇಳಿದಳೆಂದರೆ, ಅದನ್ನು ಪಾಲಿಸಬೇಕು ಅಷ್ಟೇ.
ಕೆಲವು ಮಕ್ಕಳು ಇದಕ್ಕೆ ವ್ಯತಿರಿಕ್ತರಾಗಿರ‍್ತಾರೆ ಅದು ಬೇರೆ ವಿಚಾರ. ಆದರೆ, ಸಾಮಾನ್ಯವಾಗಿ ಅಮ್ಮ ಏನಾದರೂ ಹೇಳಿದಳೆಂದರೆ ಅದು ಪರಮ ಸತ್ಯವೆಂದೇ ಮಕ್ಕಳು ತಿಳಿಯುತ್ತಾರೆ. ಅಲ್ವೇ?
ಅಮ್ಮನ ಮಾತನ್ನು ಮೀರಲಾಗದೇ ಮಕ್ಕಳು ವರ್ತಿಸುವ ಬಗ್ಗೆ ಇಲ್ಲೆರಡು ಸನ್ನಿವೇಶಗಳಿವೆ. ಅದನ್ನು ಓದಿದ ಬಳಿಕ ಮಕ್ಕಳಿಗೆ ಹೇಗೆ ವಿಷಯ ಮನದಟ್ಟು ಮಾಡಿಕೊಡಬೇಕೆಂದು ನೀವೇ ಯೋಚಿಸಿ.
ಘಟನೆ ಒಂದು
ಒಮ್ಮೆ ಐದು ವರ್ಷದ ಪುಟ್ಟ ಮಗು ಶ್ರೇಯಾಳಿಗೆ ಯಾವುದೋ ಆರೋಗ್ಯ ಸಮಸ್ಯೆ ಉಂಟಾಗಿತ್ತು. ವೈದ್ಯರ ಶಿಫಾರಸು ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಬೇಕೆಂದು ಅವಳ ಅಮ್ಮ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಲು ವೈದ್ಯರು ಬಂದರು. ಆದರೆ, ಶ್ರೇಯಾ ಇನ್ನೂ ಏನೇನೋ ಆಟವಾಡುವ ವಿಚಾರದಲ್ಲೇ ಇದ್ದಳು.
ಆಗ ಅವಳ ಅಮ್ಮ ‘ಸುಮ್ಮನಿರು. ಸ್ಕ್ಯಾನ್ ಮಾಡಿಸುವಾಗ ಏನೆಂದರೆ ಏನೂ ಚಲನೆ ಮಾಡಬಾರದು. ಸುಮ್ಮನೆ ಮಲಗಿಕೊ’ಎಂದರು. ಅವಳಿಗೆ ಹೆಚ್ಚು ಎಚ್ಚರ ಮೂಡಿಸಬೇಕೆಂದು ಪದೇ ಪದೇ ‘ಹಾಗೇಯೇ ಮಲಗು. ತಲೆ ಅಲ್ಲಾಡಿಸಬೇಡ. ಬೆರಳುಗಳನ್ನು ಸಹ ಅಲ್ಲಾಡಿಸಬೇಡ’ಎಂದು ಹೇಳುತ್ತಾ ಉಳಿದರು.
ಅಲ್ಲಿ ಸೈಲೆನ್ಸ್ ಇತ್ತು ಎಷ್ಟೆಂದರೆ, ಉಸಿರಾಡಿಸುವುದೂ ಸಹ ಕೇಳುವಷ್ಟು. ಮಶಿನ್ ಸದ್ದು ಬಿಟ್ಟು ಬೇರೆ ಯಾವ ಸದ್ದೂ ಅಲ್ಲಿರಲಿಲ್ಲ. ಆಗ ಕೆಲವು ಸೆಕೆಂಡ್‌ಗಳ ಕಾಲ ಸುಮ್ಮನಿದ್ದ ಶ್ರೇಯಾ, ಪಿಸುಮಾತಿನಲ್ಲಿ ಕೇಳ್ತಾಳೆ‘ಅಮ್ಮಾ ನಾನು ಉಸಿರಾಡಿಸಬಹುದಾ?’
ಘಟನೆ ಎರಡು
ಏಳು ವರ್ಷದ ಸೌಮ್ಯಾ ಯಾವುದೋ ಪುಸ್ತಕವನ್ನು ಓದುತ್ತ ಕೂತಿದ್ದಳು. ಅವಳ ಅಮ್ಮ ಏನೋ ಕೆಲಸದಲ್ಲಿ ತಲ್ಲೀನರಾಗಿದ್ದರು. ಪುಸ್ತಕ ಓದುತ್ತಿದ್ದ ಸೌಮ್ಯಾಳಿಗೆ ಯಾವುದೋ ಸಮಸ್ಯೆ ಬಂತು. ಸರಿ ಅಮ್ಮನಲ್ಲಿಗೆ ಹೋಗಿ ‘ಅಮ್ಮಾ ಎಂ.ಎಸ್ ಫುಲ್‌ಫಾರ್ಮ್ ಏನು?’ಎಂದು ಕೇಳಿದಳು.
‘ಎಂ.ಎಸ್ಸಾ? ಮೈಕ್ರೊಸಾಫ್ಟ್’ಎಂದು ಅಮ್ಮ ಉತ್ತರ ನೀಡುತ್ತಾರೆ. ಮತ್ತೆ ಹಿಂತಿರುಗಿ ತನ್ನ ಜಾಗಕ್ಕೆ ಹೋಗಿ ಓದಲು ಕುಳಿತ ಸೌಮ್ಯಾ ಜೋರಾಗಿ ಹೇಳಿಕೊಳ್ಳುತ್ತಾಳೆ‘ಮೈಕ್ರೊಸಾಫ್ಟ್ ಧೋನಿ ಇಸ್ ಅ ಫೇಮಸ್ ಕ್ರಿಕೆಟರ್.....’

ದೇವರ ನಿದ್ದೆ

ದೇವರ ನಿದ್ದೆ

ಚೆಂದ, ಮಧುರ ಹೂಗಳು ನನಗಿಲ್ಲಿ
ಭಾರವಾಗಿ ಕಾಡುತ್ತಿವೆ
ಹೂ ಮಾರುವವನ ಕರ್ಕಶ ದನಿಗೆ
ಹಾಲುಗಲ್ಲದ ಕಂದ ಬೆಚ್ಚಿ ಅಳುವಾಗ

ಇಂಡಿಯಾದ ವಿಜಯವೂ ನನಗೆ ಅಪ್ರಸ್ತುತ
ಅಬ್ಬರದ ದೇಶಪ್ರೇಮಕ್ಕೆ, ಮಧ್ಯರಾತ್ರಿಯ ಹರುಷಕ್ಕೆ
ತತ್ತರಿಸುವ ಹಸುಳೆಯ ನಿದ್ದೆಗಣ್ಣಿನ
ಆಕ್ರಂದನ ನನ್ನೆದೆಯಲ್ಲಿ

ಕೂಸಿಗೆ ನೆಮ್ಮದಿಯ ನಿದ್ದೆ
ನೀಡಲೂ ನನ್ನಿಂದ ಸಾಧ್ಯವಿಲ್ಲವೆಂಬ
ಹತಾಶೆ ಕಾಡುವಾಗ ನಶೆಯೇರಿದ ನಗರಕ್ಕೆ
ಹಿಡಿಶಾಪ ಹಾಕುತ್ತೇನೆ

ಬಯಲೇ ಸಿಗದ ಯಾನಕ್ಕೂ
ಲಯವೇ ಇಲ್ಲದ ಬದುಕಿಗೂ
ಸಂಬಂಧ ಕಲ್ಪಿಸಿ ನರಳುತ್ತೇನೆ
ರಾತ್ರಿ ರಾತ್ರಿ