Monday 21 September 2009

ಬಪ್ಪ...

ಬಪ್ಪ.. ಎಲ್ಲರ ಕಣ್ಣಿಗೆ ದೊಡ್ಡ ಹೆಗಡೇರು. ನಮಗೆಲ್ಲ ಮಗಾ ಮಗಾ ಎನ್ನುವ ಸ್ನೇಹಜೀವಿ. ಮಕ್ಕಳನ್ನು ಕಂಡರೆ ಅದೇನು ವಾತ್ಸಲ್ಯವೋ?..ಮಗಳೇ, ಮಗಾ ಎಂದೇ ನಮ್ಮನ್ನು ಮಾತನಾಡಿಸುತ್ತಿದ್ದ ಬಪ್ಪ ನಮ್ಮದೇ ಅಪ್ಪಂದಿರ ಹತ್ತಿರ ಮಾತ್ರ ಹೆಚ್ಚಾಗಿ ದ್ವೇಷವನ್ನೇ ಸಾಸಿದವ...ತನ್ನ ಸರೀಕರಲ್ಲಿ ಯಾವತ್ತೂ ಜಗಳ ಕಾಯ್ದುಕೊಂಡಿದ್ದವ.
ಪ್ರಾಯಕಾಲದಲ್ಲಿ ದೊಡ್ಡ ಅಡಿಕೆ ಮೂಟೆಯನ್ನು ಒಬ್ಬನೇ ಹೊರುತ್ತಿದ್ದನಂತೆ...ಇಡೀ ತೋಟವನ್ನು ಒಬ್ಬನೇ ಹದ ಮಾಡಿದ್ದನಂತೆ. ಸಿಟ್ಟು ಬಂದಾಗ ಮಗು ಎಂಬುದನ್ನು ನೋಡದೇ ಅವನದ್ದೇ ಮಗನನ್ನು ಅಂಗಳಕ್ಕೆ ತೆಗೆದು ಬಿಸಾಕಿದ್ದನಂತೆ..ಎಂಬಿತ್ಯಾದಿ ಅವನ ಕುರಿತಾಗಿದ್ದ ಕಥೆಗಳು ರೋಚಕವೆನಿಸುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸುಮಾರು ೬೫ ದಾಟಿದ ಬಳಿಕವೂ ರಾತ್ರಿ ಹೊತ್ತು ತೋಟಕ್ಕೆ ಹೋಗಿ ಬರುತ್ತಿದ್ದುದನ್ನು ನಾವೇ ಕಂಡಿದ್ದರಿಂದ ಭಾರೀ ಸಾಹಸಿ ಎಂದು ಎಂದೇ ಭಾವಿಸಿದ್ದೆವು.
ಹೇಳಿಕೊಳ್ಳುವಂತ ಸಿರಿವಂತರೇನೂ ಅಲ್ಲದಿದ್ದರೂ ದೊಡ್ಡಸ್ತಿಕೆ ತೋರುವುದರಲ್ಲಿ ಬಪ್ಪ ಎಂದಿಗೂ ಹಿಂದೇಟು ಹಾಕುತ್ತಿರಲಿಲ್ಲ. ಅದಕ್ಕಾಗಿಯೇ ಊರಿನಲ್ಲಿ ಒಂದು ವಿಶಿಷ್ಟ ಸ್ಥಾನ ಕಾಪಾಡಿಕೊಂಡಿದ್ದ ಎಂದರೂ ಸರಿ. ಅಪ್ಪ ಹಾಗೂ ಚಿಕ್ಕಪ್ಪನಲ್ಲಿ ಹಲವಾರು ಬಾರಿ ಜಗಳ ಕಾಯ್ದುಕೊಂಡು, ಕತ್ತಿ ತೆಗೆದು ಹೊಡೆಯಲು ಹೊರಟಿದ್ದನ್ನು ನಾವೇ ಎಷ್ಟೋ ಸಲ ನೋಡಿದ್ದೆವು. ಆಗೆಲ್ಲ ಅವನ ಬಗ್ಗೆ ಒಂದು ಬಗೆಯ ಭಯವಾಗುತ್ತಿತ್ತು. ಜಗಳವಾದ ಮಾರನೇ ದಿನವೇ ಮಗಳೇ ಎಂದು ಆತ್ಮೀಯವಾಗಿ ಕರೆದು, ನಿನ್ನೆಯಷ್ಟೇ ಅಪ್ಪನೊಂದಿಗೆ ಕಿತ್ತಾಡಿದ ಬಪ್ಪ ಇವನೇನಾ ಅನ್ನಿಸುವಂತೆ ಮಾಡಿಬಿಡುತ್ತಿದ್ದ.
ಅವನೊಂದಿಗೆ ಚಹಾ ಕುಡಿಯಲು, ತಂಬಾಕಿನ ಕವಳ ಹಾಕಲು ನಾನು ಎಷ್ಟೋ ಬಾರಿ ಜತೆಗಾರ್ತಿಯಾಗಿರುತ್ತಿದ್ದೆ. ತಂಬಾಕು ತಿನ್ನಬೇಡ ಎಂದು ಅಪ್ಪ ಬೈಯ್ದು, ಹೊಡೆದರೂ ಸಣ್ಣ ಎಲೆಯಲ್ಲಿ ಕವಳ ಮಾಡಿ ತಂಬಾಕು ಸೇರಿಸಿ ‘ಏನಾಗುವುದಿಲ್ಲ, ತಿನ್ನು. ನಾನಿಲ್ಲದಿದ್ದಾಗ ಒಬ್ಬಳೇ ತಿನ್ನಬೇಡ’ಎಂದು ಕೊಡುತ್ತಿದ್ದ ಬಪ್ಪನ ಪ್ರೀತಿಯನ್ನು ಅಲ್ಲಗಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಅವನೊಂದಿಗೆ ಚಹಾ ಕುಡಿದರೆ ಅಮ್ಮನಿಗೂ ಬೇಸರವಾಗುತ್ತಿತ್ತು. ‘ನಿಂಗೆ ಚಹಾ ರೂಢಿ ಮಾಡಿಬಿಡುತ್ತಾನೆ. ಆಮೇಲೆ ಬಿಡುವುದು ನಿಂಗೆ ಸಾಧ್ಯವಾಗುವುದಿಲ್ಲ’ಎಂಬ ಆಕ್ಷೇಪ ಅವಳದ್ದು. ಆದರೆ, ಹೈಸ್ಕೂಲು ಮೆಟ್ಟಿಲೇರುತ್ತಿದ್ದಂತೆ ನಾನು ತಂಬಾಕು ಬಿಟ್ಟೆ, ಜತೆಗೆ ಚಹಾವೂ ದೂರವಾಯಿತು ಎಂಬುದು ಬೇರೆ ಮಾತು.
ಅವಳು ಮಾದಿ. ಹಾಗೆಂದರೆ ಯಾರಿಗೂ ಅರ್ಥವಾಗುವುದಿಲ್ಲ. ಮತ್ತೀಗಾರ ಮಾದಿ ಎಂದರೆ ನಮ್ಮೂರಿನ ಎಲ್ಲರಿಗೂ ಆಕೆಯ ಚಿತ್ರಣ ತಕ್ಷಣ ಮೂಡುತ್ತದೆ. ಪೂರ್ತಿ ಹೆಸರು ಮಹಾದೇವಿ. ಯಾರು ಹಾಗೆ ಕರೆದರೋ ಗೊತ್ತಿಲ್ಲ, ಮಾದಿ ಎಂದೇ ಹೆಸರಾಗಿದ್ದು ನಿಜ. ಇಬ್ಬರು ಮಕ್ಕಳನ್ನು ಹೊಂದಿದ್ದ ಆಕೆಯ ಗಂಡ ಎಲ್ಲಿಗೆ ಹೋಗಿದ್ದ, ಏನು ಮಾಡುತ್ತಿದ್ದ ಎಂಬುದು ಬಹುಶಃ ಯಾರಿಗೂ ತಿಳಿದಿಲ್ಲ. ಬಪ್ಪನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಕೆ ನಾ ಕಂಡಂತೆ ತೀರ ಸರಳವಾಗಿಯೇ ಇದ್ದಳು. ಆದರೆ, ನನ್ನ ಆಯಿ, ಚಿಕ್ಕಮ್ಮ ಮುಂತಾದ ಹೆಂಗಸರ ‘ಒಂದು ರೀತಿಯ’ದೃಷ್ಟಿಗೆ ಆಕೆ ಯಾಕೆ ಕಾರಣಳಾಗಿದ್ದಳು ಎನ್ನುವುದು ನನಗೆ ಹೈಸ್ಕೂಲು ದಾಟಿದ ಬಳಿಕ ಅರಿವಾಯಿತು.
ಬಪ್ಪ ದಿನವೂ ರಾತ್ರಿ ಹೋಗುತ್ತಿದ್ದುದು ತೋಟ ಕಾಯುವ ಕೆಲಸಕ್ಕಲ್ಲ, ಅವಳ ಮನೆಗೆ ಎಂಬುದೂ ನಿಧಾನ ತಿಳಿಯಿತು. ಆಗ ಕೆಲವು ದಿನಗಳ ಕಾಲ ಈ ವಿಚಾರ ತಲೆಕೆಡಿಸುವ, ಆನಂತರ ತಮಾಷೆಯ ವಸ್ತುವಾಗಿದ್ದ ನಮಗೆ ಈಗ ಅದೇನೂ ದೊಡ್ಡದಾಗಿ ಕಾಣಿಸುತ್ತಿಲ್ಲ. ವಿಶೇಷವೆಂದರೆ, ಹಸುವಿನಂತಹ ದೊಡ್ಡಾಯಿ ಈ ವಿಚಾರ ತಿಳಿದಿದ್ದರೂ ಬಪ್ಪನ ಮೇಲೆ ಬೇಸರ ತೋರಿಸಿಕೊಂಡಿದ್ದನ್ನು ನಾವ್ಯಾರೂ ಕಂಡಿಲ್ಲ.
ವಿಷಾದವೆಂದರೆ, ಬಪ್ಪನಂತಹ ಗಂಡಸಿನ ಸ್ನೇಹ ಮಾಡಿಯೂ ಸಹ ಮಾದಿ ತನ್ನ ಮಗಳನ್ನು ಮದುವೆ ಮಾಡಲು ಸಾಹಸಪಟ್ಟಿದ್ದು ನಮ್ಮ ಕಣ್ಣೆದುರಿಗೇ ನಡೆದಿತ್ತು. ಬದುಕಿನುದ್ದಕ್ಕೂ ಜತೆಗಾತಿಯಾಗಿದ್ದ ಹೆಣ್ಣನ್ನು ಕಷ್ಟ ಬಂದಾಗ ಬಿಟ್ಟುಬಿಡುವುದು ಗಂಡಸಿಗೆ ಮಾತ್ರ ಸಾಧ್ಯವೇನೋ? ಆ ಕಾಲಕ್ಕೆ ಬಪ್ಪನೂ ಸಾಕಷ್ಟು ಹಣ್ಣಾಗಿದ್ದ. ಮನೆಯ ಆಡಳಿತದಲ್ಲಿ ಅವನ ಹಸ್ತಕ್ಷೇಪವಿರಲಿಲ್ಲ ಎನ್ನುವುದು ನಿಜವಾದರೂ, ಹಾಗೆ ಕಷ್ಟದಿಂದ ದೂರವಾಗಿ ನಿಂತಿದ್ದು ಮಾತ್ರ ಇವತ್ತಿಗೂ ಮನದ ಆಳದಲ್ಲಿ ಎಲ್ಲೋ ಎಚ್ಚರಿಕೆಯ ಗಂಟೆಯಾಗಿ ನಿಂತಿದೆ.

ನಂಬಿ ಕೆಟ್ಟವರಿಲ್ಲ!

ನಂಬಿ ಕೆಟ್ಟವರಿಲ್ಲ!

ಯಾವುದೀ ರಾಗ?
ವಸಂತ ಮಾತ್ರವಲ್ಲ, ವರ್ಷವಿಡೀ
ಕೇಳಿದ್ದ ರಾಗ ಚಿರಪರಿಚಿತ.
ಹೆಸರು ಮಾತ್ರ ಗೊತ್ತಿಲ್ಲ.

ರಾಗದ ಚೆಲುವು ನನಗಾಗಿ ಅಲ್ಲ..ವೆಂಬ ಸತ್ಯ ಗೊತ್ತಿದ್ದರೂ
ಚಂಚಲಗೊಳ್ಳುವ ಮನಸು.
ಹಾಡುತ್ತ ಹಾಡುತ್ತ..
ಮೋಡಿ ಮಾಡುವ ರಾಗಕ್ಕೆ ಮನ ಸೋಲದವರ‍್ಯಾರು?

ಹಳೆಯ ರಾಗವಾದರೂ ಹೊಸತರಂತೆ ಹಾಡುವ ಕಲೆ
ಅದಕ್ಕೆ ಗೊತ್ತು.
ಹೇಳಿದ್ದನ್ನೇ ಹೇಳುತ್ತ..
ಹಾಡಿದ್ದನ್ನೇ ಹಾಡುತ್ತಿದ್ದರೂ ಮನ ಸೋತಿದೆ.

ಮಧುರ ಕಂಠದಲ್ಲಿದೆ
ಹಳೆಯ ದಿನಗಳ ಮೆಲುಕು.
ರಾಗದಲ್ಲಿ ಎದೆಹಾಡು.
ಭಾವದಲ್ಲಿ ಮಾತ್ರ ಏನೋ ಅದಲು-ಬದಲು.

ಅದು ಗಂಡು ಹಕ್ಕಿ.
ಹಾಡಿಗೆ, ರಾಗಕ್ಕೆ, ಬದಲಾವಣೆಗೆ
ಹೇಳಿಕೊಡಬೇಕೇ?
ದಿಕ್ಕು ತಪ್ಪಿಸುವ ಹಕ್ಕಿ.

Tuesday 4 August 2009

ಕೆಪ್ಪ...

ಕೆಪ್ಪ...
ಅದ್ಯಾರು ಹೆಸರಿಟ್ಟರೋ? ಅದಕ್ಕೆ ತಕ್ಕಂತೆ ಕಿವುಡೇ ಆಗಿದ್ದ. ಅಥವಾ ಅವನ ಕಿವುಡನ್ನೇ ನೋಡಿ ಆ ಹೆಸರು ಬಂತೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಹುಟ್ಟಿದಾಗಿನಿಂದ ಕಂಡ ಜೀವಗಳಲ್ಲಿ ಅದೂ ಒಂದು. ದೊಡ್ಡಪ್ಪನ ಮದುವೆಯಾಗಿ ದೊಡ್ಡ ಸಂಸ್ಥಾನದಂಥ ಮನೆಗೆ ದೊಡ್ಡಾಯಿ ಬರುವಾಗ ಆಕೆಯ ತವರಿನವರು ಹಸುವನ್ನು ಹೊಡೆದು ಕಳುಹಿಸುವಂತೆ ಅವನನ್ನು ಕಳುಹಿಸಿದ್ದರು. ಹಾಗೆ ಬಂದ ಜೀವ ಕಡಿಮೆಯೆಂದರೂ ಐವತ್ತು ವರ್ಷಗಳ ಕಾಲ ನಮ್ಮ ಮನೆಯಲ್ಲೇ ಇತ್ತು ಎಂಬುದನ್ನು ನೆನೆದುಕೊಂಡರೆ..ಕಾಲವಾಗಿ ನಾಲ್ಕಾರು ವರ್ಷಗಳ ಬಳಿಕ ಇತ್ತೀಚೆಗೆ ಕೆಪ್ಪ ಬದುಕಿದ ರೀತಿ ಯಾಕೋ ಗಾಢವಾಗಿ ತಾಕುತ್ತಿದೆ.
ಮಳೆ, ಚಳಿ, ಬಿಸಿಲೆನ್ನದೇ ಬೆಳಗ್ಗೆ ಬೇಗ ಎದ್ದು ಸೊಪ್ಪು ತರುವುದು, ಕೊಟ್ಟಿಗೆ ನಿಗಾ ಇಡುವುದು, ಮಣ್ಣು ಹೊರುವುದು ಒಟ್ಟಿನಲ್ಲಿ ಆಯಾ ಕಾಲದ ಕೆಲಸಗಳಿಗೆ ಎಂದೂ ಕೊರತೆಯಿಲ್ಲ. ಅದಕ್ಕೇ ಕೆಪ್ಪನಿಗೆ ಮೈ ಕಸುವು ಕಡಿಮೆಯಾದಾಗ ದೊಡ್ಡಪ್ಪ ಕೆಲಸ ಸಾಗದೆಂದು ಹಾರಾಡುತ್ತಿದ್ದ. ಚಹಾ, ತಿಂಡಿ, ತಂಗಳನ್ನದ ಊಟದ ಜತೆಗೆ ರಾತ್ರಿಯವರೆಗೂ ಮೈಮುರಿಯುವಂಥ ದುಡಿತ. ರಾತ್ರಿ ತನ್ನ ಪಾಡಿಗೆ ಬೀಡಿ ಎಳೆಯುತ್ತಾ, ಆಕಾಶ ನೋಡುತ್ತಾ ಮಲಗುತ್ತಿದ್ದ ಕೆಪ್ಪ ಅಂದು ಮನುಷ್ಯನೆಂದೇ ಅನಿಸಿರಲಿಲ್ಲ. ಕಂಡಾಗಿನಿಂದ ಬೊಚ್ಚು ಬಾಯಲ್ಲೇ ಇದ್ದ ಕಪ್ಪು ಮೈನ ಕೆಪ್ಪ, ಕೊಟ್ಟಿಗೆಯ ಒಂದು ಪಕ್ಕದಲ್ಲಿ ದನ ಕರುಗಳ ಜೊತೆಗೇ ಮಲಗುತ್ತಿದ್ದುದು. ಅಲ್ಲೇ ಅವನ ಮಂಚ. ಅದರ ಮೇಲೆ ನೇತಾಡುತ್ತಿದ್ದ ಕತ್ತಿ..ಕುಡುಗೋಲು..
ದೊಡ್ಡಪ್ಪನ ದೊಡ್ಡಸ್ತಿಕೆ ಜತೆಗೆ ಸ್ವಲ್ಪ ಅತಿ ಅನಿಸುವಂತ ಸಿಟ್ಟು ಸಹಿಸಿಕೊಂಡು, ವರ್ಷಕ್ಕೆರಡು ಬಾರಿ ಪಿತ್ಥ ನೆತ್ತಿಗೇರಿ ಹೊಡೆದರೆ ಹೊಡೆಸಿಕೊಂಡು..ಹುಂ ಹುಂ.. ಎಂದು ಮುಲುಗುಟ್ಟುತ್ತಿದ್ದುದು ಈಗಲೂ ಕಿವಿಗೆ ಕೇಳಿಸಿದಂತಾಗುತ್ತದೆ. ಕೈ-ಬಾಯಿ ಸನ್ನೆಯಲ್ಲೇ ಎಲ್ಲ ಅರ್ಥೈಸಿಕೊಳ್ಳುತ್ತಿದ್ದವ, ಮಕ್ಕಳು ಏನಾದರೂ ಛೇಡಿಸಿದರೆ ಬೊಚ್ಚು ಬಾಯಿ ಬಿಟ್ಟುಕೊಂಡು ನಗುತ್ತಿದ್ದ. ಯಾವತ್ತೂ ಅವನನ್ನು ನಾವು ವಿಶ್ವಾಸಕ್ಕೆ ಪಾತ್ರವೆಂದು ಪರಿಗಣಿಸಿಯೇ ಇರಲಿಲ್ಲ. ಆದರೆ, ಅವನಿಗೆ ಅನ್ನ, ತಿಂಡಿ ಕಡಿಮೆ ಕೊಡುತ್ತಾರೆಂದು ಅನ್ನಿಸಿದರೆ, ಬೇಜಾರಾಗುತ್ತಿತ್ತು. ಯಾಕೀಗೆ? ಎನಿಸುತ್ತಿತ್ತು. ಆಯಿ ಹತ್ತಿರ ಹೇಳಿ ‘ನೀನಾದರೂ ಕೊಡು’ ಎಂದರೆ, ‘ಅಯ್ಯೋ ದೊಡ್ಡಪ್ಪ ಬೈಯುತ್ತಾರೆ’ಎಂದು ಹಿಂಜರಿಯುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಏನಾದರೂ ನೀಡುತ್ತಿದ್ದಳು.
ಅಕ್ಟೋಬರ್ ತಿಂಗಳ ರಜೆಯಲ್ಲಿ ಆಟದ ಹಾಣೆಗಿಂಡು ಕೆತ್ತಿಕೊಡಲು ನೆರವಾಗುತ್ತಿದ್ದ ಕೆಪ್ಪ. ಮಿರಿ ಮಿರಿ ಮಿಂಚುವ ಕತ್ತಿ ತಾನು ಹರಿತವೆಂದು ತೋರುತ್ತಿದ್ದರೆ ಸರಸರನೆ ಹಾಣೆಗಿಂಡು, ಕೋಲು ರೆಡಿಯಾಗುತ್ತಿತ್ತು. ಅಂಥ ಕೆಪ್ಪನಿಗೂ ಒಮ್ಮೊಮ್ಮೆ ಕೋಪ ಬಂದರೆ, ಜೋರಾಗಿ ಕಿರುಚಾಡುತ್ತಿದ್ದ. ದೊಡ್ಡಪ್ಪನ ಮೇಲೆ. ಏನು ಹೇಳುತ್ತಿದ್ದಾನೆ ಎಂಬುದೇ ತಿಳಿಯದ್ದರಿಂದ ಬಹುಶಃ ಅಷ್ಟು ವರ್ಷ ಅಲ್ಲಿರಲು ಸಾಧ್ಯವಾಯಿತು.
ನನ್ನನ್ನು ಆಗಾಗ ಕಂಗಾಲು ಮಾಡುವ ವಿಚಾರವೆಂದರೆ, ಅವನಿಗೂ ಒಮ್ಮೆ ಮದುವೆಯಾಗಿತ್ತು..ಮಕ್ಕಳಿದ್ದರು ಎನ್ನುವುದು. ಮದುವೆಯಾಗಿ, ಮಕ್ಕಳಿದ್ದವನನ್ನು ಇನ್ನೊಬ್ಬರ ಸಂಸಾರಕ್ಕೆ ಕೆಲಸ ಮಾಡಿಕೊಡಲು ಕಳುಹಿಸಿದ್ದರೆಂಬ ವಿಚಾರ ಬುದ್ಧಿ ಬಲಿಯುತ್ತಿದ್ದಂತೆ ನಮಗೆ ತಿಳಿದಿತ್ತು. ಹೇಗೆ ಹೆಂಡತಿ, ಮಕ್ಕಳನ್ನು ಬಿಟ್ಟು ಬಂದ ಎಂಬುದು ನಿಗೂಢ. ಅಥವಾ ಪರಿಸ್ಥಿತಿಯೇ ಹಾಗಿರಲೂ ಸಾಧ್ಯವಿತ್ತು. ಕೆಲವೊಮ್ಮ ಅವನ ಮಗಳು ಅಪ್ಪನನ್ನು ನೋಡಿಕೊಂಡು ಹೋಗಲು ಬರುತ್ತಿದ್ದಳು. ಕೆಲವು ನಿಮಿಷಗಳ ಮಾತುಕತೆ ಅಷ್ಟೆ. ಕೊಟ್ಟಿಗೆಯ ಅವನ ಹಾಸಿಗೆಯ ಮೇಲೆ ಕುಳಿತೇ ಆಡುವ ಮಾತುಕತೆ. ಆಗೆಲ್ಲ ನಾವು ಯಾರಾದರೂ ಸಿಕ್ಕರೆ, ‘ತನ್ನ ಮಗಳು’ ಎಂಬಂತೆ ಖುಷಿಯಿಂದ ಸನ್ನೆ ಮಾಡಿ ತೋರಿಸುತಿದ್ದುದು ಈಗ ಯಾಕೋ ಎದೆಯನ್ನು ಒದ್ದೆ ಮಾಡುತ್ತಿದೆ.
ದೊಡ್ಡಾಯಿ ಸತ್ತ ಬಳಿಕ ಅವನಿಗೆ ಈ ಮನೆಯಲ್ಲಿ ತನ್ನವರು ಯಾರೂ ಇಲ್ಲವೆಂದು ಅನಿಸುತ್ತಿತ್ತೋ ಏನೋ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಅವನಿಗೂ ವಯಸ್ಸಾಗಿತ್ತು. ದೊಡ್ಡಪ್ಪನೂ ಸೊಸೆಯ ಆಡಳಿತದಲ್ಲಿ ಮೆದುವಾಗಿದ್ದ. ಅಷ್ಟು ವರ್ಷ ದುಡಿಸಿಕೊಂಡು, ಕನಿಷ್ಟವೆಂದರೂ ಐವತ್ತು ವರ್ಷ ಕಾಲ ಲಕ್ಷಾಂತರ ರೂ.ದುಡಿದಿದ್ದ ಕೆಪ್ಪ ಮನೆಯಿಂದ ಹೊರಬಿದ್ದಿದ್ದ. ಅಲ್ಪ, ಸ್ವಲ್ಪ ಹಣ ನೀಡಿದ್ದರು ಎಂಬ ಸುದ್ದಿಯುತ್ತು. ಆದರೆ, ನ್ಯಾಯವಂತೂ ಸಿಗುವ ಸಾಧ್ಯತೆಯೇ ಇರಲ್ಲ. ಹತ್ತಿರದ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸಿ, ನಾವು, ನಮ್ಮ ಮನೆಯವರು ಕಂಡಾಗ ನಕ್ಕು, ಕೈ ಬಾಯಿ ಸನ್ನೆಗಳ ಮೂಲಕ ತನ್ನದೇ ಭಾಷೆಯಲ್ಲಿ ಆತ್ಮೀಯತೆ ತೋರುತ್ತಿದ್ದ ಕೆಪ್ಪ ಸತ್ತಾಗ ಮಣ್ಣು ಮಾಡಲು ಯಾರೂ ಇರಲಿಲ್ಲ. ಎಲ್ಲರ ಜೀವನದ ಅಂತಿಮ ರಹಸ್ಯವೂ ಇದೇ ಇರಬಹುದೇ?
ತಾಯಿಯಾಗುವ ಹಂತದಲ್ಲಿರುವ ನನಗೀಗ ಕೆಪ್ಪನಲ್ಲೂ ಅಪ್ಪ ಕಾಣಿಸುತ್ತಾನೆ.

Saturday 25 July 2009

ಹಾಗೆ ಬಾ ದಾರಿಗೆ

ಹಾಗೆ ಸುಮ್ಮನೆ ಬಂದು ಹೋಗುವವರ ಮಧ್ಯೆ ಇವನದ್ದೊಂದು ಕಾಟ
ಹೋಗು ಎಂದರೆ ಹೋಗಲೊಲ್ಲ ಇರು ಎನ್ನುವ ತಾಕತ್ತು ನನ್ನಲ್ಲಿಲ್ಲ
ಸುಮ್ಮನೆ ನಡೆದಿದ್ದರೆ ಇವನಿಗೇನಾಗುತ್ತಿತ್ತು?
ನೆನಪು ಮರೆಯುವ ಹೊತ್ತು ಇದಾಗಿತ್ತು ಎನ್ನಲು ಬಾಯೇ ಬರದು.

ಕಪ್ಪು-ಬಿಳುಪು ಕ್ಯಾನ್ವಸಿನಲ್ಲಿ ಬಣ್ಣದ ಚಿತ್ರಗಳು
ಎಷ್ಟೋ ಮಂದಿ ಕನವರಿಸಿದ್ದರು. ಅದ್ಯಾವ ಮಾಯೆ? ದಿಕ್ಕು ತಪ್ಪಿತ್ತು.
ನಂಬಿದ ಮನಸು ಒಪ್ಪಲು ಸಿದ್ಧವಿರಲಿಲ್ಲ
ವಿಸ್ಮಯ ಹುಟ್ಟಿಸುತ್ತ ಮಗ್ಗುಲು ಬದಲಿಸಿತ್ತು

ಏನಾದರೇನಂತೆ ನೀ ನಡಿ ಎಂದರೆ ಇವ ಇಲ್ಲೇ.
ಕೆಸರು ಗುಂಡಿಗೆ ಇಳಿಯಬೇಡ ಎಂದರೆ ಅದೇ ರೋಮಾಂಚನ ಎಂದ
ಕೈ ಹಾಕಿದರೆ ಸೀದುಹೊಗುತ್ತೀ-ಭಯ ಹುಟ್ಟಿಸುವ ಯತ್ನ
ಕೇಳುತ್ತಿಲ್ಲ..ನಾ ಕಳೆದುಹೋಗುವ ಭಯ ಕಳಕೊಂಡೆ!

Thursday 23 July 2009

ಹೊಸತು

ಪ್ರತಿ ತಿಂಗಳ ಕಿಬ್ಬೊಟ್ಟೆ ನೋವಿಗೆ ಹೊಸತಾಗಿ ಕರಗು ಮಾರಾಯ
ಅಂದರೆ ಇವನಿಗೆ ಅಚ್ಚರಿ
ಹೊಸತಾಗಿ ಪ್ರೀತಿಸಲು ಸಾಧ್ಯವೇ?
ನಿನ್ನ ಪ್ರತಿ ನಗುವಿಗೆ ನಾನು ಹೊಸ ನಗೆ ಸೇರಿಸುತ್ತೀನಲ್ಲೋ
ಭ್ರಮೆ ಹುಟ್ಟಿಸುವ ಮನಸು...
ಎಲ್ಲ ನನ್ನದೆಂಬ ಧಿಮಾಕಿನ ಮನಸು...
ದ್ರೋಹ ಬಗೆಯುವ ಮನಸು..
ಕಾಲ ಬುಡ ನೋಡಿಕೋ ಎಂದರೂ ಎಚ್ಚೆತ್ತುಕೊಳ್ಳದ ಮನಸು..
ಗಳೆಲ್ಲ ಒಮ್ಮೊಮ್ಮೆ ಹೊಸದಾಗಿ ಹುಟ್ಟಿಸುವ ಅಚ್ಚರಿಯಲ್ಲೇ ಬದುಕು
ಎಂದರೂ ಇವ ನಂಬಲೊಲ್ಲ
....
ಅವನೆದುರು ತೆರೆದುಕೊಂಡು ಇವನೆದುರು ಬಿಗಿದುಕೊಳ್ಳುವ
ಜೀವಕ್ಕೆ ..ಜೀವದೊಂದಿಗಿನ ಆಟಕ್ಕೆ ಪ್ರೀತಿ ನೆಪ.
ಹೊಸತಾಗಿ ಬದುಕುವ ಹಠಕ್ಕೆ
ಹೊಸತನ್ನು ಕಾಣುವ ನೋಟಕ್ಕೆ
ನೆನಪುಗಳ ಹಂಗಿಲ್ಲ.